ಬೆಂಗಳೂರು : ಕಳೆದ ಮೂರು ವರ್ಷಗಳಿಂದ ಬರೋಬ್ಬರಿ 32 ಕೋಟಿ ರೂ. ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದ ಮಂತ್ರಿ ಮಾಲ್ ಗೆ ಬಿಬಿಎಂಪಿ ಬೀಗ ಜಡಿದಿದೆ.
ಮಂತ್ರಿ ಮಾಲ್ ಮಾಲೀಕರು ಆಸ್ತಿ ತೆರಿಗೆ ಪಾವತಿಗಾಗಿ 15 ದಿನ ಕಾಲವಕಾಶ ಕೇಳಿದ್ದರು. ಅದರಂತೆ ನೋಟಿಸ್ ನೀಡಿ 15 ದಿನಗಳು ಕಳೆದ ಕಾರಣ ಪಶ್ಚಿಮ ವಿಭಾಗದ ತೆರಿಗೆ ಅಧಿಕಾರಿಗಳು ನಿನ್ನೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಮಾಲ್ ಗೆ ಬೀಗ ಹಾಕಲಾಗಿದೆ. ಈ ಹಿಂದೆ ಮಾಲ್ ಮಾಲೀಕರು 10 ಕೋಟಿ ಚೆಕ್ ನೀಡಿದ್ದರು. ಆದರೆ ಅದು ಬೌನ್ಸ್ ಆಗಿರುವುದರಿಂದಾಗಿ ಪಾಲಿಕೆ ಕಾನೂನು ಕೋಶದ ಶಿಫಾರಸ್ಸಿನ ಮೇರೆಗೆ ಬೀಗ ಹಾಕಿ ಮಾ. 1ವರೆಗೆ ತೆರಿಗೆ ಪಾವತಿ ಮಾಡಲು ಕಾಲವಕಾಶ ನೀಡಿದ್ದು, ಕಟ್ಟದೇ ಹೋದರೆ ಬಿಬಿಎಂಪಿ ಮಾಲ್ ನ್ನು ವಶಪಡಿಸಿಕೊಳ್ಳುವುದಾಗಿ ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.










