ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು: ಸಾವಿನ ಸಂಖ್ಯೆ 5ಕ್ಕೇರಿಕೆ.

26

ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್‍ಗೆ ಒಳಗಾಗಿದ್ದ ಮತ್ತೋರ್ವ ಬಾಣಂತಿ ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ರಾತ್ರಿ ಸಾವನ್ನಪ್ಪಿದ್ದಾರೆ. ಕೂಡ್ಲಗಿಯ ಸುಮಯಾ (25) ಮೃತ ಬಾಣಂತಿ ಎಂದು ತಿಳಿದು ಬಂದಿದೆ. ಸುಮಯಾ ಕಳೆದ 22 ದಿನಗಳಿಂದ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದರೊಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಸಂಖ್ಯೆ 5ಕ್ಕೆ ಏರಿದೆ. ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿಕೊಂಡ ಬಳಿಕ ಸುಮಯಾ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಹೀಗಾಗಿ, ಅವರನ್ನು ನವೆಂಬರ್ 12 ರಂದು ಜಿಲ್ಲಾಸ್ಪತ್ರೆಯಿಂದ ಬಿಮ್ಸ್‍ಗೆ ರವಾನೆ ಮಾಡಲಾಗಿತ್ತು. ಈ ನಡುವೆ ಕಿಡ್ನಿ ವೈಫಲ್ಯವಾಗಿ ಸತತ ಡಯಾಲಿಸಿಸ್ ಮಾಡಲಾಗುತ್ತಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ 22 ದಿನಗಳ ಬಳಿಕ ಸುಮಯಾ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ನವೆಂಬರ್ 9 ರಿಂದ 11ರ ವರೆಗೆ ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ನಾಲ್ವರು ತಾಯಂದಿರು ಮರಣ ಹೊಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, 3 ದಿನಗಳಲ್ಲಿ ನಡೆಸಿದ 34 ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಪೈಕಿ 7 ಪ್ರಕರಣಗಳಲ್ಲಿ ಮಾತ್ರ ಲೋಪದೋಷ ಕಂಡು ಬಂದಿದೆ. ಮೂತ್ರಪಿಂಡ ಗಾಯದಂತಹ ಸಮಸ್ಯೆಗಳು 7 ಪ್ರಕರಣಗಳಲ್ಲಿ ಕಂಡು ಬಂದಿದೆ. ಅದರಲ್ಲಿ ನಾಲ್ವರು ರೋಗಿಗಳು ಸಾವನ್ನಪ್ಪಿದ್ದಾರೆ. ಉಳಿದ 3 ರೋಗಿಗಳಲ್ಲಿ 2 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಬ್ಬ ರೋಗಿಯು ಬಳ್ಳಾರಿ ವಿಮ್ಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದರು.