ಮಂಗಳೂರು: ಬಸ್ಸು ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಫುಡ್ ಡೆಲಿವರಿ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಗರದ ಕಂಕನಾಡಿ ಸಮೀಪ ನಡೆದಿದೆ.
ಮೃತ ವ್ಯಕ್ತಿಯನ್ನು ಕಕ್ಕಿಂಜೆ ಸಮೀಪದ ಚಾರ್ಮಾಡಿ ಜಲಾಲಿಯಾ ನಗರದ ನಿವಾಸಿ ವಹೀದಾ ಅವರ ಮಗ ಸಿನಾನ್ (21) ಎಂದು ಗುರುತಿಸಲಾಗಿದೆ. ಈತ ಮಂಗಳೂರಿನ ಯೆನಪೋಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಮಾಹಿತಿಗಳ ಪ್ರಕಾರ, ಸಿನಾನ್ ಪಾರ್ಟ್ ಟೈಮ್ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದು, ನಿನ್ನೆ ರಾತ್ರಿ ವೇಳೆ ಫುಡ್ ಡೆಲಿವರಿ ಮಾಡಲು ಹೊರಟಾಗ ಖಾಸಗಿ ಬಸ್ಸೊಂದು ಬೈಕನ್ನು ಓವರ್ ಟೇಕ್ ಮಾಡುವ ಸಮಯದಲ್ಲಿ ಬೈಕಿನ ಹ್ಯಾಂಡಲ್ ಬಾರ್ ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಸಿನಾನ್ ಬಸ್ಸಿನಡಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತ ಸಿನಾನ್ ಬಡ ಕುಟುಂಬದವನಾಗಿದ್ದು, ತನ್ನ ಕುಟುಂಬಕ್ಕೆ ಏಕೈಕ ಆಧಾರಸ್ತಂಭವಾಗಿದ್ದ ಮತ್ತು ತನ್ನ ವಿದ್ಯಾಭ್ಯಾಸದ ಖರ್ಚನ್ನು ಫುಡ್ ಡೆಲಿವರಿ ಮಾಡಿ ನಿಭಾಯಿಸುತ್ತಿದ್ದರು.
ಮೃತ ಸಿನಾನ್ ತಂದೆ ತಾಯಿ, ತಮ್ಮ, ತಂಗಿಯನ್ನು ಅಗಲಿದ್ದಾರೆ.










