ಬಸ್ ಟಿಕೆಟ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಪ್ರತಿಭಟನೆ.

34

ಬೆಂಗಳೂರು: ಸರ್ಕಾರಿ ಬಸ್ ಪ್ರಯಾಣದ ಬೆಲೆ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ನಗರದ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಿಜೆಪಿ ನಾಯಕರು ಇಂದು ಪ್ರತಿಭಟನೆ ನಡೆಸಿದ್ದಾರೆ. ಸಿಎಂ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮುಖವಾಡ ಧರಿಸಿದ್ದ ಬಿಜೆಪಿ ಕಾರ್ಯಕರ್ತರು, ವಿನೂತನವಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಕರ್ನಾಟಕದ ಏಳು ಕೋಟಿ ಜನರು ಹೊಸ ವರ್ಷದ ಉಡುಗೊರೆಗಾಗಿ ಕಾಯುತ್ತಿದ್ದೆವು. ಮೋದಿಯವರು ಹೊಸ ವರ್ಷಕ್ಕೆ ನಿಜವಾದ ಉಡುಗೊರೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ದಿ ಗ್ರೇಟ್ 14 ಬಜೆಟ್ ಚಾಂಪಿಯನ್ ಸಿಎಂ ಸಿದ್ದರಾಮಯ್ಯನವರು ಸಾರಿಗೆ ಬೆಲೆ ಹೆಚ್ಚಳ ಮಾಡಿ ಉಡುಗೊರೆ ನೀಡಿದ್ದಾರೆ ಎಂದು ಟೀಕೆ ಮಾಡಿದರು. ಬಸ್ ನಿಲ್ದಾಣದಲ್ಲಿದ್ದ ಪುರುಷ ಪ್ರಯಾಣಿಕರಿಗೆ ಗುಲಾಬಿ ಹೂ ನೀಡುವುದರ ಮೂಲಕ ಶುಭಾಶಯ ತಿಳಿಸಲಾಯಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ನಂತರ ಪ್ರತಿದಿನ ತೆರಿಗೆ ಏರಿಕೆ ಮಾಡುವುದೇ ಸಾಧನೆ ಮಾಡುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿರುವ ರಾಜ್ಯ ಸರ್ಕಾರ, ದರ ಹೆಚ್ಚಳಯನ್ನ ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಇದು ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ನೀಡಿ ಪುರುಷರಿಗೆ ಬರೆ ಹಾಕುವ ಸರ್ಕಾರ ಎಂದು ಟೀಕೆ ಮಾಡಿದರು.