ಬಾಂಗ್ಲಾದೇಶದ ವಿಚಾರ ಪ್ರಧಾನಿ ಮೋದಿಗೆ ಬಿಡುತ್ತೇನೆ: ಡೊನಾಲ್ಡ್ ಟ್ರಂಪ್.

32

ವಾಷಿಂಗ್ಟನ್: ಬಾಂಗ್ಲಾದೇಶದ ವಿಚಾರವನ್ನು ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಡುತ್ತೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು. ನಂತರ ಸುದ್ದಿಗಾರರ ಜೊತೆ ಟ್ರಂಪ್ ಮತ್ತು ನರೇಂದ್ರ ಮೋದಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಸರ್ಕಾರ ಬದಲಾವಣೆಯಲ್ಲಿ ಅಮೆರಿಕದ ಡೀಪ್ ಸ್ಟೇಟ್ ಪಾತ್ರವಿದೆಯೇ ಎಂಬ ಪ್ರಶ್ನೆಗೆ ಡೊನಾಲ್ಡ್ ಟ್ರಂಪ್, ಇದರಲ್ಲಿ ಡೀಪ್ ಸ್ಟೇಟ್ ಪಾತ್ರವಿಲ್ಲ. ಈ ವಿಚಾರದಲ್ಲಿ ಮೋದಿಯವರು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದಾರೆ. ಈ ವಿಚಾರವನ್ನು ನಾನು ಪ್ರಧಾನಿ ಮೋದಿ ಅವರಿಗೆ ಬಿಡುತ್ತೇನೆ ಎಂದು ತಿಳಿಸಿದರು. ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಭಾರತವು ಆ ದೇಶದ ಪರಿಸ್ಥಿತಿಯನ್ನು ಹೇಗೆ ನೋಡುತ್ತದೆ ಎಂಬುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ತಮ್ಮ ಕಳವಳಗಳನ್ನು ಹಂಚಿಕೊಂಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.