ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಬಳಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಸೇನೆ ತಿಳಿಸಿದೆ.
ಜನವರಿ 11ರಂದು ಎಲ್ಒಸಿ ಬಳಿ ಕಾರ್ಯಾಚರಣೆ ನಡೆಯುತ್ತಿದ್ದಾಗ ಪಂಜಾಬ್ನ ಗುರುದಾಸ್ಪುರದ 24 ವರ್ಷದ ಗುರುಪ್ರೀತ್ ಸಿಂಗ್ ಅವರು ತೀವ್ರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸೇನಾ ಶಿಬಿರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಆದರೆ ಅವರು ನಿನ್ನೆ ನಿಧನರಾಗಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುರುಪ್ರೀತ್ ಸಿಂಗ್ ಅವರು ತಮ್ಮ ತಾಯಿ ಲಖ್ವಿಂದರ್ ಕೌರ್ ಅವರನ್ನು ಅಗಲಿದ್ದಾರೆ ಎಂದು ಸೇನೆ ಹೇಳಿದೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ‘ಬಾರಾಮುಲ್ಲಾ ಸೆಕ್ಟರ್ನಲ್ಲಿ ಮುಂಚೂಣಿ ಪ್ರದೇಶದಲ್ಲಿ ಕಾರ್ಯಾಚರಣೆಯ ಕಾರ್ಯವನ್ನು ನಿರ್ವಹಿಸುತ್ತಿರುವಾಗ ಜಿಎನ್ಆರ್ ಗುರುಪ್ರೀತ್ ಸಿಂಗ್ ಅವರು ದುರದೃಷ್ಟಕರವಾಗಿ ನಮ್ಮನ್ನಗಲಿದ್ದಾರೆ ಎಂದು ತಿಳಿಸಲು ವಿಷಾದವಿದೆ. ಈ ದುಃಖದ ಸಮಯದಲ್ಲಿ, ಭಾರತೀಯ ಸೇನೆಯು ದುಃಖತಪ್ತ ಕುಟುಂಬದೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಮತ್ತು ಅವರ ಯೋಗಕ್ಷೇಮಕ್ಕೆ ಬದ್ಧವಾಗಿದೆ’ ಎಂದು ಸೇನೆಯ ಚಿನಾರ್ ಕಾರ್ಪ್ಸ್ ತಿಳಿಸಿದೆ.
ಚಿನಾರ್ ಕಾರ್ಪ್ಸ್ ಪಡೆ ವೀರಯೋಧ ಗುರುಪ್ರೀತ್ ಸಿಂಗ್ ಅವರಿಗೆ ಪುಷ್ಪಾಂಜಲಿ ಅರ್ಪಿಸಿ ನಮನ ಸಲ್ಲಿಸಿದೆ. ಅಗಲಿದ ಯೋಧನ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದೆ.










