ಬಾಲಿವುಡ್ ನ ಖ್ಯಾತ ನಟ ಹಾಗೂ ನಿರ್ದೇಶಕ ಸತೀಶ್ ಕೌಶಿಕ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಸತೀಶ್ ಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ದೆಹಲಿಯ ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸತೀಶ್ ನಿಧನ ಹೊಂದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು ಯಾರಿ ರಸ್ತೆಯ ಮುಂಬೈನ ವರ್ಸೋವಾದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಹಿರಿಯ ನಟ ಅನುಪಮ್ ಖೇರ್ ತಮ್ಮ ಪ್ರೀತಿಯ ಸ್ನೇಹಿತ ಸತೀಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ನನಗೆ ಗೊತ್ತು ಸಾವು ಈ ಜಗತ್ತಿನ ಪರಮ ಸತ್ಯ. ನಾನು ಬದುಕಿರುವಾಗ ನನ್ನ ಆತ್ಮೀಯ ಗೆಳೆಯ ಸತೀಶ್ ಕೌಶಿಕ್ ಬಗ್ಗೆ ಈ ವಿಷಯ ಬರೆಯುತ್ತೇನೆ ಎಂದು ನಾನು ನನ್ನ ಕನಸಿನಲ್ಲೂ ಯೋಚಿಸಿರಲಿಲ್ಲ. 45 ವರ್ಷಗಳ ಸ್ನೇಹಕ್ಕೆ ಇದ್ದಕ್ಕಿದ್ದಂತೆ ಪೂರ್ಣ ವಿರಾಮ. ನೀನಿಲ್ಲದೆ ನನ್ನ ಜೀವನ ಎಂದಿಗೂ ಮೊದಲಿನಂತೆ ಆಗುವುದಿಲ್ಲ ಸತೀಶ್. ಓಂ ಶಾಂತಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಸತೀಶ್, ನಟನೆಯ ಜೊತೆಗೆ ನಿರ್ದೇಶನವನ್ನೂ ಮಾಡಿದ್ದರು. ‘ಜಲ್ವಾ’, ‘ಸ್ವರ್ಗ್’, ‘ಆಂಟಿ ನಂಬರ್ 1’, ‘ಕಲ್ಕತ್ತಾ ಮೇಲ್’, ‘ಭಾಗಿ 3’ ಸೇರಿ ನೂರಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕಂಗನಾ ರಣಾವತ್ ನಿರ್ದೇಶಿಸಿ, ನಟಿಸುತ್ತಿರುವ ‘ಎಮರ್ಜೆನ್ಸಿ’ ಚಿತ್ರದಲ್ಲಿ ಜಗ್ಜೀವನ್ ರಾಮ್ ಪಾತ್ರವನ್ನು ಅವರು ಮಾಡುತ್ತಿದ್ದರು. ಈ ಸಿನಿಮಾ ತೆರೆಗೆ ಬರುವುದಕ್ಕೂ ಮೊದಲೇ ಸತೀಶ್ ನಿಧನ ಹೊಂದಿದ್ದಾರೆ.










