ಐಎಎಸ್ ಅಧಿಕಾರಿಗೆ ಥಳಿತ – ಮೂವರ ಬಂಧನ…

54
firstsuddi

ಗಾಂಧಿನಗರ: ಐಎಎಸ್ ಅಧಿಕಾರಿಯೊಬ್ಬರನ್ನು ಕೆಲವು ಮೀನುಗಾರರು ಒತ್ತೆಯಾಳಾಗಿಟ್ಟುಕೊಂಡು ಥಳಿಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

ಗುಜರಾತ್ ನ ಐಎಎಸ್ ಅಧಿಕಾರಿ ನಿತಿನ್ ಸಾಂಗ್ವಾನ್ ಅವರು ಸಬರ್ ಕಾಂತ್ ಜಿಲ್ಲೆಯ ಧರೋಯ್ ಅಣೆಕಟ್ಟಿನ ಬಳಿಯ ಅಂಬಾವಾಡ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ಮೀನುಗಾರಿಕೆಯಲ್ಲಿ ತೊಡಗಿದ್ದ ಗುಂಪೊಂದು ಅವರನ್ನು ಒತ್ತೆಯಾಳಾಗಿ ಇರಿಸಿ, ಥಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೀನುಗಾರಿಕೆ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಪತ್ತೆ ಹಚ್ಚಿದ ಕಾರಣಕ್ಕಾಗಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.

ಮೀನುಗಾರಿಕಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಂಗ್ವಾನ್ ಅವರು ಸೋಮವಾರ ಇತರ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಮೀನುಗಾರಿಕಾ ಗುತ್ತಿಗೆದಾರರಲ್ಲಿ ಒಬ್ಬರಾದ ಬಾಬು ಪರ್ಮಾರ್ ಸಾಂಗ್ವಾನ್ ಜೊತೆ ವಾಗ್ವಾದ ಪ್ರಾರಂಭಿಸಿದ್ದಾನೆ. ಇದಕ್ಕೆ ಸಾಂಗ್ವಾನ್ ಬಾಬು ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಈ ವೇಳೆ ಕೋಪಗೊಂಡ ಬಾಬು, ಸಾಂಗ್ವಾನ್ ಅವರ ಮೊಣಕಾಲನ್ನು ಕಚ್ಚಿದ್ದಾನೆ. ಬಳಿಕ ಇನ್ನೂ ನಾಲ್ವರು ಅಲ್ಲಿಗೆ ಬಂದು ಐಎಎಸ್ ಅಧಿಕಾರಿಗೆ ಥಳಿಸಿದ್ದಾರೆ. ಬಾಬು ಇನ್ನೂ 10-12 ಜನರನ್ನು ಕರೆದಿದ್ದು, ಅವರೆಲ್ಲರೂ ಮಾರಕಾಸ್ತ್ರಗಳನ್ನು ಹಿಡಿದು ಬಂದಿದ್ದಾರೆ. ಬಳಿಕ ಸಾಂಗ್ವಾನ್ ಅವರನ್ನು ಒತ್ತೆಯಾಳಾಗಿ ಇರಿಸಿ, ಥಳಿಸಿದ್ದಾರೆ.

ತಮ್ಮ ಮೇಲೆ ಪೊಲೀಸ್ ದೂರನ್ನು ನೀಡಬಾರದು ಎಂದು ಜನರ ಗುಂಪು ಸಾಂಗ್ವಾನ್ ಅವರಿಗೆ ಬೆದರಿಕೆ ಹಾಕಿದೆ. ಇದಕ್ಕೆ ಸಾಂಗ್ವಾನ್ ಒಪ್ಪಿದ್ದು, ಕಾಗದದಲ್ಲಿ ಇದನ್ನು ಬರೆದು ಸಹಿಯನ್ನೂ ಹಾಕಿದ್ದಾರೆ. ಬಳಿಕ ಸಾಂಗ್ವಾನ್ ಅವರನ್ನು ಬಿಟ್ಟು ಕಳುಹಿಸಿದ್ದಾರೆ.

ಅಲ್ಲಿಂದ ತಪ್ಪಿಸಿಕೊಂಡ ಅಧಿಕಾರಿಗಳು ಠಾಣೆಗೆ ಬಂದು ದೂರು ನೀಡಿದ್ದಾರೆ. ವಡಾಲಿ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದು, ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.