ಬೆಂಗಳೂರು: ನಗರದಲ್ಲಿ ಕಿಲ್ಲರ್ ಬಿಎಂಟಿಸಿ ವೋಲ್ವೋ ಬಸ್ಗೆ ಮತ್ತೊಂದು ಬಲಿಯಾಗಿದೆ.
ಮಾರತ್ತಹಳ್ಳಿಯ ವರ್ತೂರು ಮುಖ್ಯ ರಸ್ತೆಯಲ್ಲಿ ಬಿಎಂಟಿಸಿ ವೋಲ್ವೋ ಬಸ್ ಹರಿದು ಬೈಕ್ ಸವಾರ ಮೃತಪಟ್ಟಿದ್ದಾನೆ. ಬೈಕ್ ಸವಾರ ಎಳಂಗೋವನ್ ಸೆಂಕತ್ತವಲ್(43) ಮೃತ ದುರ್ದೈವಿ. ಕುಂದಲಹಳ್ಳಿ ಜಂಕ್ಷನ್ ಕಡೆಯಿಂದ ಬೆಳ್ಳಂದೂರಿಗೆ ಬೈಕ್ ಸವಾರ ತೆರಳುತಿದ್ದ, ಅದೇ ಮಾರ್ಗದಲ್ಲಿ ಬಿಎಂಟಿಸಿ ವೋಲ್ವೋ ಬಸ್ ಬರುತ್ತಿತ್ತು. ಈ ವೇಳೆ ವೋಲ್ವೋ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಸವಾರ ಗಂಭೀರ ಗಾಯಗೊಂಡಿದ್ದಾರೆ.
ಅಪಘಾತದಿಂದ ತಲೆ ಹಾಗೂ ಮುಖದ ಭಾಗಕ್ಕೆ ಬಲವಾದ ಗಾಯವಾಗಿದ್ದು, ಕೂಡಲೇ ಸ್ಥಳೀಯರು ಗಾಯಾಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಸೇರುವ ಮೊದಲೇ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಎಚ್ಎಎಲ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.










