ಬಣಕಲ್: ಮೂಡಬಿದ್ರೆಯ ಅಳ್ವಾಸ್ ಆರ್ಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೊಟ್ಟಿಗೆಹಾರದ ರಾಮನಗರದ ನಿವಾಸಿ ಬಿ.ಜಿ.ಪೂಜಾ ತೃತೀಯ ವರ್ಷದ ವೈದ್ಯಕೀಯ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.
ಈ ಹಿಂದೆ ಕೊಟ್ಟಿಗೆಹಾರದ ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿ ಪ್ರಸ್ತುತ ವೈದ್ಯಕೀಯ ಕೋರ್ಸ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಪೂಜಾ ಪರೀಕ್ಷೆಯಲ್ಲಿ ಶ್ರೇಷ್ಠ ಅಂಕ ಪಡೆದು ಹೆಮ್ಮೆಯ ಗರಿ ಮುಡಿಗೇರಿಸಿದ್ದಾರೆ. ವೈದ್ಯಕೀಯ ತೃತೀಯ ವರ್ಷದ ಪರೀಕ್ಷೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಶ್ರೇಷ್ಠ ಅಂಕ ಪಡೆದಿದ್ದು, ಅದರಲ್ಲಿ ಪೂಜಾ 1200 ಅಂಕಗಳಿಗೆ 903 ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಪೂಜಾ ಕೊಟ್ಟಿಗೆಹಾರ ರಾಮನಗರದ ಗೋಪಾಲ್ ಹಾಗೂ ಸುಶೀಲ ದಂಪತಿಯ ಪುತ್ರಿಯಾಗಿದ್ದು ಇವರ ಸಾಧನೆಗೆ ಪೋಷಕರು ಹಾಗೂ ಅತ್ತಿಗೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಅಭಿನಂಧಿಸಿದ್ದಾರೆ.










