ಬಿಜೆಪಿಯು ರಾಜ್ಯದ ಕಾಂಗ್ರೆಸ್ ಸರ್ಕಾರ ಬೀಳಿಸುವ ವಿಚಾರದಲ್ಲಿ ತಿರುಕನ ಕನಸು ಕಾಣುತ್ತಿದೆ: ಡಿಕೆಶಿ.

44
firstsuddi

ಬೆಂಗಳೂರು: ”ಬಿಜೆಪಿಯು ರಾಜ್ಯದ ಕಾಂಗ್ರೆಸ್ ಸರ್ಕಾರ ಬೀಳಿಸುವ ವಿಚಾರದಲ್ಲಿ ತಿರುಕನ ಕನಸು ಕಾಣುತ್ತಿದ್ದಾರೆ. ನಮ್ಮ ಸರ್ಕಾರವನ್ನು ಬೀಳಿಸಲು ಆಗುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.

ಕೆಂಗೇರಿಯಲ್ಲಿ ಶಿಕ್ಷಕರ ಕೃತಜ್ಞತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ”ನಿಮ್ಮ ಪಕ್ಷದ ನಾಯಕರು ಸರ್ಕಾರ ಬೀಳಿಸುವ ವಿಚಾರದಲ್ಲಿ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಯಡಿಯೂರಪ್ಪ ಅವರಿಗೆ ತಿಳಿಸಲು ಬಯಸುತ್ತೇನೆ. ನಿಮ್ಮ ಪಕ್ಷಗಳಲ್ಲಿ ಎಷ್ಟು ಶಾಸಕರು ಕಡಿಮೆ ಆಗುತ್ತಾರೆ ಎಂದು ನಾನು ಈಗ ಚರ್ಚೆ ಮಾಡುವುದಿಲ್ಲ. ನಾವು ಜನಾಶೀರ್ವಾದದಿಂದ 135 ಹಾಗೂ 3 ಪಕ್ಷೇತರರ ಬೆಂಬಲದೊಂದಿಗೆ ಬಹಳ ಬಲಿಷ್ಟವಾಗಿದ್ದೇವೆ. ಹೀಗಾಗಿ ನಮ್ಮ ಸರ್ಕಾರವನ್ನು ಬೀಳಿಸಲು ಆಗುವುದಿಲ್ಲ” ಎಂದು ತಿಳಿಸಿದರು.

”ನಾವು ಹಾಗೂ ಸಿದ್ದರಾಮಯ್ಯ ಅವರು ಕೋಮುವಾದಿ ಪಕ್ಷ ಬಿಜೆಪಿ ಸಮಾಜವನ್ನು ಒಡೆಯುತ್ತದೆ ಎಂಬ ಕಾರಣಕ್ಕೆ ಅವರನ್ನು ಅಧಿಕಾರದಿಂದ ದೂರವಿಡಲು ಕುಮಾರಸ್ವಾಮಿ ಅವರನ್ನು ಐದು ವರ್ಷಗಳ ಕಾಲ ಬೇಷರತ್ತಾಗಿ ಮುಖ್ಯಮಂತ್ರಿ ಮಾಡಿದೆವು. ಈ ಮೈತ್ರಿ ಸರ್ಕಾರವನ್ನು ಕೆಡವಿದ ಯಡಿಯೂರಪ್ಪ, ಯೋಗೇಶ್ವರ್, ಮುನಿರತ್ನ ಅವರನ್ನೇ ಕುಮಾರಸ್ವಾಮಿ ಅವರು ಅಪ್ಪಿಕೊಂಡು ಅವರ ವಕ್ತಾರರಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ದೂರಿದರು.

”ಇಂತಹ ನೀತಿಗೆಟ್ಟ ರಾಜಕಾರಣ ಕಂಡು ನನಗೆ ಅಸಹ್ಯವಾಗುತ್ತದೆ. ಜನ ಯಾರನ್ನು ನಂಬಬೇಕು ಎಂಬುದು ತಿಳಿಯುತ್ತಿಲ್ಲ. ಯಾರೂ ಏನೇ ಒಂದಾಗಲಿ, ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಶಾಸಕರಿಗೆ ತಲಾ 50 ಕೋಟಿ ಕೊಟ್ಟು ಸರ್ಕಾರ ಬೀಳಿಸಲು ಬಿಲ್ಲು ಬಾಣ ತೆಗೆದುಕೊಂಡಿದ್ದರು. ನಮ್ಮ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರನ್ನೂ ಬಿಜೆಪಿಗರು ಸಂಪರ್ಕ ಮಾಡಿದ್ದರು. ಆದರೆ, ಇದ್ಯಾವುದೂ ಸಾಧ್ಯವಾಗಲಿಲ್ಲ” ಎಂದರು.

”ಈಗ ನಾನು ಮತ್ತು ಸಿಎಂ ಅವರು ನಿಮಗೆ ಕೈ ಮುಗಿದು ಬೆಂಗಳೂರು ಗ್ರಾಮಾಂತರ ಹಾಗೂ ನಗರದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ. ನೀವೆಲ್ಲರೂ ಒಬ್ಬರು ಹತ್ತು ಪದವೀಧರರನ್ನು ನೋಂದಣಿ ಮಾಡಿಸಿ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸ್ಥಾನವನ್ನು ನಾವು ಗೆಲ್ಲುವಂತೆ ಮಾಡಬೇಕು. ಆಗ ನಾವು ನೀವು ಹೇಳಿದವರಿಗೆ ಬಿ ಫಾರ್ಮ್ ನೀಡುತ್ತೇವೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಶಿಕ್ಷಕರು ಮನಸ್ಸು ಮಾಡಿದರೆ, ಏನೆಲ್ಲಾ ಮಾಡಬಹುದು ಎಂಬುದು ನಮಗೆ ಗೊತ್ತಿದೆ” ಎಂದು ತಿಳಿಸಿದರು.

”ಶಿಕ್ಷಕರ ಬೇಡಿಕೆ, ಎನ್​ಪಿಎಸ್ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದೇವೆ. ನಾವು ಈಗಾಗಲೇ ಜನರಿಗೆ ಕೊಟ್ಟಿರುವ ಭರವಸೆ ಈಡೆರಿಸುತ್ತಿದ್ದೇವೆ. ನಿಮ್ಮ ಬಗ್ಗೆಯೂ ನಮಗೆ ಸಹಾನುಭೂತಿ ಇದೆ. ನೀವು ತಾಳ್ಮೆ ಕಳೆದುಕೊಳ್ಳುವ ಅಗತ್ಯವಿಲ್ಲ. ನಿಮ್ಮನ್ನು ನಾವು ಕೈ ಬಿಡುವುದಿಲ್ಲ. ರಾಜ್ಯದಲ್ಲಿ 50 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ. ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣಕ್ಕೆ ಬೆಂಗಳೂರಿಗೆ ಬರುವುದನ್ನು ತಡೆಯಬೇಕು. ಇದಕ್ಕಾಗಿ ಮುಖ್ಯಮಂತ್ರಿಗಳು ಸಿಎಸ್ಆರ್ ನಿಧಿಯಲ್ಲಿ 2 ಸಾವಿರ ಪಬ್ಲಿಕ್ ಶಾಲೆ ತೆರೆಯಲು ಬಜೆಟ್​ನಲ್ಲಿ ಘೋಷಣೆ ಮಾಡಿದ್ದಾರೆ. ಈ ಚುನಾವಣೆ ನಂತರ ಅದನ್ನು ಕಾರ್ಯರೂಪಕ್ಕೆ ತರುತ್ತೇವೆ” ಎಂದರು.