ಕಲಬುರಗಿ: ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯು ಆಡಳಿತದ ಚುಕ್ಕಾಣಿ ಹಿಡಿದಿದೆ. ಮೇಯರ್ ಆಗಿ ಬಿಜೆಪಿಯ ವಿಶಾಲ್ ದರ್ಗಿ ಅವರು ಆಯ್ಕೆಯಾದರೆ ಉಪ ಮೇಯರ್ ಆಗಿ ಶಿವಾನಂದ್ ಪಿಸ್ತಿ ಆಯ್ಕೆಯಾಗಿದ್ದಾರೆ.
ವಿಶಾಲ್ ದರ್ಗಿ ಅವರು 33 ಮತಗಳನ್ನು ಪಡೆದಿದ್ದು, ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕಪನೂರ್ 32 ಮತಗಳನ್ನು ಪಡೆದಿದ್ದಾರೆ. ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿಯ ಶಿವಾನಂದ್ ಪಿಸ್ತಿ ಅವರು 33 ಮತಗಳನ್ನು ಪಡೆದಿದ್ದು, ಎದುರಾಳಿ ಸ್ಪರ್ಧಿ ವಿಜಯಲಕ್ಷ್ಮಿ ಅವರಿಗೆ 32 ಮತಗಳು ಚಲಾವಣೆಯಾಗಿವೆ. ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ಪಾಲಿಗೆ ಮೇಯರ್ ಚುನಾವಣೆ ಭಾರೀ ಕುತೂಹಲ ಮೂಡಿಸಿತ್ತು. ಅದಾಗ್ಯೂ, ಎರಡೂ ಸ್ಥಾನಗಳು ಬಹುತೇಕ ನಮಗೆ ಫಿಕ್ಸ್ ಎಂದು ಅರಿತ ಬಿಜೆಪಿ ನಾಯಕರು, ಕಾರ್ಯಕರ್ತರು ವಿಜಯೋತ್ಸವ ನಡೆಸಲು ಟೌನ್ ಹಾಲ್ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅದರಂತೆ ಮೇಯರ್, ಉಪಮೇಯರ್ ಆಗಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಘೋಷಣೆಯಾಗುತ್ತಿದ್ದಂತೆ ಬಿಜೆಪಿ ನಾಯಕರು, ಕಾರ್ಯಕರ್ತರು ವಿಜಯೋತ್ಸವ ಆರಂಭಿಸಿದ್ದಾರೆ.










