ಬಿಜೆಪಿ ನಾಯಕ ಕಿರಿತ್ ಸೋಮಯ್ಯ, ಮಗನ ವಿರುದ್ಧ ಪ್ರಕರಣ ದಾಖಲು…

119
firstsuddi

ಮುಂಬೈ : ಐಎನ್ಎಸ್ ವಿಕ್ರಾಂತ್ ಹಗರಣಕ್ಕೆ ಸಂಬಂಧ ಪಟ್ಟಂತೆ ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಮತ್ತು ಅವರ ಮಗ ನೀಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾಜಿ ಸೈನಿಕ ಬಾಬನ್ ಭೋಸಲೆ ಎಂಬವರು ನಿನ್ನೆ ತಡರಾತ್ರಿ ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ವಂಚನೆಯ ಬಗ್ಗೆ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ, ಕಿರಿತ್ ಸೋಮಯ್ಯ, ಅವರ ಮಗ ನೀಲ್ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 420 (ವಂಚನೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

1961 ರಲ್ಲಿ ಕಾರ್ಯಾರಂಭ ಮಾಡಿದ ಭಾರತೀಯ ನೌಕಾಪಡೆಯ ಮೆಜೆಸ್ಟಿಕ್-ಕ್ಲಾಸ್ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್, 1971 ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪೂರ್ವ ಪಾಕಿಸ್ತಾನದ ನೌಕಾ ದಿಗ್ಬಂಧನವನ್ನು ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಇದನ್ನು 1997ರಲ್ಲಿ ರದ್ದುಗೊಳಿಸಲಾಯಿತು. ಜನವರಿ 2014ರಲ್ಲಿ, ಹಡಗನ್ನು ಆನ್ ಲೈನ್ ಹರಾಜಿನ ಮೂಲಕ ಮಾರಾಟ ಮಾಡಲಾಯಿತು. ಹಾಗಾಗಿ ಐಎನ್ಎಸ್ ವಿಕ್ರಾಂತ್ ಗೆ ನಿಧಿ ಸಂಗ್ರಹಿಸಲು ಕಿರಿತ್ ಸೋಮಯ್ಯ ಅಭಿಯಾನ ಆರಂಭಿಸಿದ್ದರು ಎಂದು ದೂರುದಾರರು ಉಲ್ಲೇಖಿಸಿದ್ದಾರೆ.

ಹಡಗು ಉಳಿಸಲು ಕಿರಿತ್ ಸೋಮಯ್ಯ ಅವರಿಗೆ ದೇಣಿಗೆ ನೀಡಿದ್ದೇನೆ ಮತ್ತು ಬಿಜೆಪಿ ನಾಯಕರು ಇದೇ ಉದ್ದೇಶಕ್ಕಾಗಿ 57 ಕೋಟಿಗೂ ಹೆಚ್ಚು ಸಂಗ್ರಹಿಸಿದ್ದಾರೆ. ಆದರೆ, ಮೊತ್ತವನ್ನು ಮಹಾರಾಷ್ಟ್ರ ರಾಜಭವನಕ್ಕೆ ಠೇವಣಿ ಮಾಡದೇ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ. 

ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಒಳಪಟ್ಟಿರುವ ಸಂಜಯ್ ರಾವುತ್ ಅವರು ನಿನ್ನೆ ಸೋಮಯ್ಯ ಅವರ ವಿರುದ್ಧ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಮಾಡಿದ್ದರು.ಈ ಆರೋಪವನ್ನು ತಳ್ಳಿಹಾಕಿದ ಕಿರಿತ್ ಸೋಮಯ್ಯ, ವಿಕ್ರಾಂತ್ ನಿಧಿ ಸಂಗ್ರಹದಲ್ಲಿ ಯಾವುದೇ ಹಗರಣ ನಡೆದಿಲ್ಲ, ನಾನು ಯಾವುದೇ ತಪ್ಪು ಮಾಡಿಲ್ಲ. ಸಂಜಯ್ ರಾವತ್ ಆರೋಪ ಮಾಡುತ್ತಿದ್ದಾರೆ, ಆದರೆ ಅವುಗಳನ್ನು ಸಾಬೀತುಪಡಿಸಲು ಪುರಾವೆಗಳನ್ನು ನೀಡಿಲ್ಲ. ಎಫ್‌ಐಆರ್ ಪ್ರತಿಯನ್ನೂ ನಾನು ಸ್ವೀಕರಿಸಿಲ್ಲ. ನಾನು ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದಿದ್ದಾರೆ.