ಬಿ.ಸಿ ಪಾಟೀಲ್ ಮನೆಗೆ ಹೋಗಿ ಲಸಿಕೆ ನೀಡಿದ್ದಕ್ಕೆ ವೈದ್ಯಾಧಿಕಾರಿ ಅಮಾನತು…

149
firstsuddi

ಹಾವೇರಿ : ಸಚಿವ ಬಿ.ಸಿ.ಪಾಟೀಲ್ ಅವರಿಗೆ ಮನೆಯಲ್ಲಿ ಕೋವಿಡ್ ಲಸಿಕೆ ನೀಡಿದ ಕೇಸ್ ಗೆ ಸಂಬಂಧಿಸಿದಂತೆ ಹಿರೇಕೆರೂರು ತಾಲ್ಲೂಕು ಟಿಹೆಚ್‍ಓ ಡಾ.ಝಡ್.ಆರ್.ಮಕಾಂದಾರ್ ಅವರನ್ನು ಅಮಾನತು ಮಾಡಿ ಭಾರತೀಯ ಆರೋಗ್ಯ ಸೇವಾ ಆಯುಕ್ತ ಕೆ.ವಿ.ತ್ರಿಲೋಕಚಂದ್ರ ಆದೇಶ ಹೊರಡಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಸಚಿವರ ಮನೆಗೆ ತೆರಳಿ ಲಸಿಕೆ ನೀಡಿದ್ದ ಸಂಬಂಧ ಡಾ. ಮಕಾಂದಾರ್ ಅವರಿಗೆ ಕಾರಣ ಕೇಳಿ ಡಾ.ರಾಜೇಂದ್ರ ದೊಡ್ಡಮನಿ ಅವರು ನೋಟಿಸ್ ಜಾರಿ ಮಾಡಿದ್ದರು. ಇದೀಗ ಟಿಹೆಚ್‍ಓ ಡಾ. ಮಕಾಂದಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಮಾರ್ಚ್ 2 ರಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಆರೋಗ್ಯ ಸಿಬ್ಬಂದಿಯನ್ನು ಮನೆಗೆ ಕರೆಸಿಕೊಂಡು ವಾಕ್ಸಿನ್ ಪಡೆದಿದ್ದರು. ಇದು ತೀವ್ರ ವಿವಾದಕ್ಕೂ ಕಾರಣವಾಗಿತ್ತು. ಅಲ್ಲದೇ ಬಿ.ಸಿ ಪಾಟೀಲ್ ಅವರು ಮನೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದರು. ಇದೇನು ದೊಡ್ಡ ವಿಷಯವೇನಲ್ಲ. ಅದರಲ್ಲಿ ತಪ್ಪೇನಿದೆ ಎಂದು ಸಚಿವ ಬಿ.ಸಿ ಪಾಟೀಲ್ ಅವರು ಪ್ರಶ್ನಿಸಿದ್ದರು. ಕಳ್ಳತನ ಮಾಡಿದ್ದೀವಾ.? ನಾವೇನು ಅಪರಾಧ ಮಾಡಿದ್ದೇವಾ? ನಾನು ಮನೆಯಲ್ಲಿ ಲಸಿಕೆ ಹಾಕಿಸಿಕೊಂಡು ಮಾದರಿಯಾಗಿದ್ದೇನೆ. ಎಂದಿದ್ದರು.