ಮೂಡಿಗೆರೆ : ಬಿ.ಹೊಸಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ: 50.70 ಲಕ್ಷ ರೂ ಲಾಭ .

322
ಕೊಟ್ಟಿಗೆಹಾರ:ಬಿ.ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2019-20ನೇ ಸಾಲಿನ ಹಣಕಾಸು ವರ್ಷದಲ್ಲಿ ರೂ 50.70 ಲಕ್ಷ ರೂ ಲಾಭ ಗಳಿಸಿದೆ ಎಂದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ  ಬಿ.ಎಂ.ರಮೇಶ್ ಹೇಳಿದರು.
ಶನಿವಾರ ಬಿ.ಹೊಸಹಳ್ಳಿ ಕೃಷಿ ಪತ್ತಿನ ಆವರಣದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರು ಸಂಘಗಳಲ್ಲಿ ಷೇರುಗಳನ್ನು ತೊಡಗಿಸಿಕೊಂಡು ಸಾಲಸೌಲಭ್ಯ ಪಡೆಯುವ ಮೂಲಕ ಸಹಕಾರ ಸಂಘವನ್ನು ಬೆಳೆಸಬೇಕು ಎಂದರು.
ಹಿರಿಯರಾದ ಹೊರಟ್ಟಿ ರಘು ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಗಳಾಗಿವೆ. ಕೃಷಿ ರೈತರು ಗೊಬ್ಬರ ಮತ್ತಿತರ ಬೆಳೆಗಳಿಗೆ ಸಾಲ ಪಡೆಯುವ ಮೂಲಕ ಇಳುವರಿ ಹೆಚ್ಚಿಸಿ ಲಾಭ ಪಡೆಯಬಹುದು. ರೈತರ ನೆರವಿಗೆ ಸಂಘಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಇದರ ಸದುಪಯೋಗ ಪಡೆದು ಸಕಾಲದಲ್ಲಿ ಸಾಲ ವಾಪಾಸ್ ಪಾವತಿಸುವ ಮೂಲಕ ಸಂಘದ ಅಭಿವೃದ್ದಿಯಲ್ಲಿ ಕೈಜೋಡಿಸಬೇಕು ಎಂದರು.
ಕೃಷಿಕರಾದ ಹಳೇಹಳ್ಳಿ ರಾಮಕೃಷ್ಣ ಮಾತನಾಡಿ, ಸಂಘದಲ್ಲಿ ಈವರೆಗೆ ಶೇ ಸೊನ್ನೆ ಬಡ್ಡಿಯಲ್ಲಿ 3 ಲಕ್ಷ ರೂವರೆಗೂ ಸಾಲ ನೀಡಲಾಗುತ್ತಿದ್ದು ಇದನ್ನು 5 ಲಕ್ಷದವರೆಗೆ ಏರಿಸಿ ಕೃಷಿ ರೈತರು ಆರ್ಥಿಕವಾಗಿ ಬೆಳೆಯಲು ಸಂಘವು ನೆರವಾಗಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ನಿರ್ವಹಣಾಧಿಕಾರಿ ಬಿ.ಆರ್.ವೇಣುಗೋಪಾಲ್ ವಾರ್ಷಿಕ ವರದಿಯನ್ನು ವಾಚಿಸಿದರು. ಸಭೆಯಲ್ಲಿ ಡಿ.ಸಿ.ಸಿ ಬ್ಯಾಂಕಿನ ಮೇಲ್ವಿಚಾರಕರಾದ ಹೆಚ್.ಬಿ.ಚಂದ್ರಶೇಖರ್, ಸಂಘದ ಉಪಾಧ್ಯಕ್ಷರಾದ ಶೇಖರ ಪೂಜಾರಿ, ನಿರ್ದೇಶಕರಾದ ಓ.ಜಿ.ರವಿ, ಗೋಪಾಲ್‍ಗೌಡ, ಉಪೇಂದ್ರ, ರಕ್ಷಿತ್, ಶಿವಕುಮಾರ್, ರಚನಾಅರುಣ್, ಸುಪ್ರಿತಜೈಪ್ರಕಾಶ್, ಸುಂದರ ಪೂಜಾರಿ, ಬಿ.ಎಂ.ರಮೇಶ್, ಎಸ್.ಸುಂದರ್ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಇದ್ದರು.