ಬುದ್ಧಿವಾದ ಹೇಳಿದ್ದಕ್ಕೆ ಪೊಲೀಸಪ್ಪನ ಬೈಕ್‍ನ್ನೇ ಸುಟ್ಟು ಹಾಕಿದ ಭೂಪ…

80
firstsuddi

ಚಿಕ್ಕಬಳ್ಳಾಪುರ: ಅಣ್ಣ-ತಮ್ಮಂದಿರ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಯಲ್ಲಿ ರಂಪಾಟ ಮಾಡ್ತಿದ್ದ ವ್ಯಕ್ತಿಗೆ ಎಎಸ್ಐ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿ ಎಎಸ್‍ಐ ಅವರ ಹೊಸ ಸ್ಕೂಟಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವೇಕಾನಂದ ನಗರದಲ್ಲಿ ನಡೆದಿದೆ.

ಗುಡಿಬಂಡೆ ನಗರದ ಹಣ್ಣಿನ ವ್ಯಾಪಾರಿ ಖಲೀಂ ಉಲ್ಲಾ ತನ್ನ ಸಹೋದರರ ಜೊತೆ ಗಲಾಟೆ ಮಾಡಿಕೊಂಡು ಆಸ್ಪತ್ರೆಗೆ ಆಗಮಿಸಿದ್ದು ಆಸ್ಪತ್ರೆಯಲ್ಲಿ ವಿನಾಕಾರಣ ಕೂಗಾಟ ನಡೆಸಿ ರಂಪಾಟ ಮಾಡ್ತಿದ್ದ. ವಿಷಯ ತಿಳಿದು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಎಎಸ್ಐ ನಂಜುಂಡ ಶರ್ಮಾ ಸೇರಿ ಇತರೆ ಪೊಲೀಸರು ಹೋಗಿ ಅಸಾಮಿ ಖಲೀಂ ಉಲ್ಲಾಗೆ ಬೈದು ಬುದ್ಧಿವಾದ ಹೇಳಿದ್ದರು.

ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋದ ಖಲೀಂ ಉಲ್ಲಾ ಮತ್ತೆ ಸಹೋದರರ ಮನೆಯ ಬಳಿ ಇದ್ದ ಕಾರು ಗಾಜು ಒಡೆದು ಬೆಂಕಿ ಹಚ್ಚಲು ಮುಂದಾಗಿದ್ದ. ಮತ್ತೆ ಮನೆ ಬಳಿ ಹೋದ ಪೊಲೀಸರು ಬೈದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ಜಿದ್ದಿನ ಮೇರೆಗೆ ಮುಂಜಾನೆ ಮನೆಗೆ ತೆರಳಿದ್ದ ಎಎಸ್ ಐ ನಂಜುಂಡ ಶರ್ಮಾರನ್ನ ಫಾಲೋ ಮಾಡಿರುವ ಖಲೀಂ ಉಲ್ಲಾ, ನಂಜುಂಡ ಶರ್ಮಾ ಮನೆ ಮುಂದೆ ನಿಲ್ಲಿಸಿ ಮನೆ ಓಳಭಾಗಕ್ಕೆ ಹೋದ ಕೂಡಲೇ ಹೊಸ ಸ್ಕೂಟಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಈ ಸಂಬಂಧ ಖಲೀಂ ಉಲ್ಲಾನನ್ನು ಗುಡಿಬಂಡೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.