ಬೆಂಗಳೂರಿಗರಿಗೆ ಸಿಹಿ ಸುದ್ದಿ: ಎರಡು ಹೊಸ ರೈಲು ನಿಲ್ದಾಣ ನಿರ್ಮಾಣ.

50

ಬೆಂಗಳೂರು: ಬೆಂಗಳೂರಿಗರಿಗೆ ಸಿಹಿ ಸುದ್ದಿ ಬಂದಿದ್ದು, 2 ಹೊಸ ರೈಲು ನಿಲ್ದಾಣ ನಿರ್ಮಾಣ ಮಾಡಲು ಕೇಂದ್ರ ರೈಲ್ವೆ ಇಲಾಖೆ ಮುಂದಾಗಿದೆ. ಬೆಂಗಳೂರಿಗೆ ಪ್ರತಿದಿನ ನೂರಾರು ರೈಲುಗಳು ಬಂದು, ಹೋಗುತ್ತವೆ. ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ, ನಗರದ ರೈಲ್ವೆ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚುತ್ತಿದೆ. ಹೀಗಾಗಿ, ಬೆಂಗಳೂರು ಹೊರವಲಯದಲ್ಲಿ 2 ರೈಲ್ವೆ ಟರ್ಮಿನಲ್‍ಗಳನ್ನು ತೆರೆಯಲು ಕೇಂದ್ರ ರೈಲ್ವೆ ಇಲಾಖೆ ಮುಂದಾಗಿದೆ. ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮಾದರಿಯಲ್ಲಿ 2 ಹೊಸ ರೈಲ್ವೆ ಟರ್ಮಿನಲ್‍ಗಳನ್ನು ನಿರ್ಮಾಣ ಮಾಡಲಾಗುವುದು. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ನೆಲಮಂಗಲ, ಚಿಕ್ಕಬಳ್ಳಾಪುರ ಜಿಲ್ಲೆಯ ದೇವನಹಳ್ಳಿಯಲ್ಲಿ ನೂತನವಾಗಿ ರೈಲ್ವೆ ನಿಲ್ದಾಣ ನಿರ್ಮಣ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಹೊಸ ರೈಲ್ವೆ ನಿಲ್ದಾಣ ಕಾಮಗಾರಿಗೆ ತಯಾರಿ ಆರಂಭವಾಗಿದೆ. 800 ಎಕರೆ ಪ್ರದೇಶದಲ್ಲಿ ರೈಲ್ವೆ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು. ಅಧಿಕಾರಿಗಳಿಂದ ಜಾಗ ಗುರುತಿಸುವ ಕೆಲಸ ಆಗಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ಕೂಡ ಇದಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ. ಜನ ದಟ್ಟಣೆ ತಪ್ಪಿಸುವಲ್ಲಿ ಈ ಟರ್ಮಿನಲ್‍ಗಳು ಸಹಕಾರಿಯಾಗಲಿವೆ ಎಂದು ಹೇಳಿದರು. ಈ ಕುರಿತು ಟ್ರಾಫಿಕ್ ತಜ್ಞರು ಮಾತನಾಡಿ, ಬೆಂಗಳೂರು ಹೊರವಲಯದಲ್ಲಿ 2 ಹೊಸ ರೈಲು ನಿಲ್ದಾಣ ನಿರ್ಮಾಣದಿಂದ ನಗರದಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ವಾಹನ ಸಂಚಾರ ಸುಗಮವಾಗಲಿದೆ ಎಂದು ಹೇಳಿದರು.