ಬೆಂಗಳೂರು: ಬೆಂಗಳೂರಿನಲ್ಲಿಂದು ಖಾಸಗಿ ಸಾರಿಗೆ ಬಂದ್ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸಿದರು.
ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕುಂಬ್ಳೆ ಅವರಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ಬೆಂಗಳೂರು ಬಂದ್ ಹಿನ್ನೆಲೆ ಕ್ಯಾಬ್ ಇಲ್ಲದಿರುವ ಮಾಹಿತಿ ನೀಡಿದ್ದಾರೆ. ಇದರಿಂದ ಬಿಎಂಟಿಸಿ ವಾಯುವಜ್ರ ಬಸ್ ಏರಿ ಅವರು ಮನೆ ಕಡೆ ತೆರಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಕುಂಬ್ಳೆ, ಬಿಎಂಟಿಸಿ ಬಸ್‍ನಲ್ಲಿ ನಿಂತು ಪ್ರಯಾಣಿಸುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ‘ಇಂದು ವಿಮಾನ ನಿಲ್ದಾಣದಿಂದ ಮನೆಗೆ ಮರಳಲು ಬಿಎಂಟಿಸಿ ಪ್ರಯಾಣ’ ಎಂದು ಕ್ಯಾಪ್ಶನ್ ನೀಡಿದ್ದಾರೆ.
ಸರ್ಕಾರದಿಂದ ಹೆಚ್ಚುವರಿ ಬಸ್ ವ್ಯವಸ್ಥೆ:
ಖಾಸಗಿ ಸಾರಿಗೆ ಚಾಲಕರು, ಮಾಲೀಕರ ಮುಷ್ಕರಕ್ಕೆ ರಾಜ್ಯ ಸರ್ಕಾರ ಸೆಡ್ಡು ಹೊಡೆದಿದೆ. ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‍ಗಳನ್ನು ರಸ್ತೆಗಿಳಿಸಲಾಗಿದೆ. ಅಲ್ಲದೇ ಮೆಟ್ರೋ ರೈಲು ಸಹ ಹೆಚ್ಚುವರಿ ಓಡಾಟ ನಡೆಸುತ್ತಿದೆ. ಬಂದ್ ನಡುವೆಯೂ ನಗರದ ಅನೇಕ ಕಡೆಗಳಲ್ಲಿ ಖಾಸಗಿ ವಾಹನಗಳ ಓಡಾಡ ಕಂಡು ಬಂದಿದೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಮೆಜೆಸ್ಟಿಕ್‍ನಿಂದ ಏರ್‌ಪೋರ್ಟ್, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಎಲೆಕ್ಟ್ರಾನಿಕ್ ಸಿಟಿ, ಸೇರಿದಂತೆ ನಗರದ ಎಲ್ಲಾ ಭಾಗಗಳಿಗೂ ಹೆಚ್ಚುವರಿ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ.










