ಬೆಂಗಳೂರು: ನಗರದಲ್ಲಿ ಅಗ್ನಿ ದುರಂತವೊಂದು ಸಂಭವಿಸಿದ ಪರಿಣಾಮ ಹಲವು ಖಾಸಗಿ ಬಸ್‌ಗಳು ಹೊತ್ತಿ ಉರಿದಿರುವ ಘಟನೆ ವೀರಭದ್ರ ನಗರದಲ್ಲಿ ನಡೆದಿದೆ.
ನಿಂತಿದ್ದ ಬಸ್‌ಗಳಿಗೆ ಹಠಾತ್ ಬೆಂಕಿ ತಗುಲಿದ್ದು, ಘಟನಾ ಸ್ಥಳಕ್ಕೆ ಎರಡು ಅಗ್ನಿ ಶಾಮಕ ವಾಹನಗಳು ದೌಡಾಯಿಸಿವೆ. 2015ರಲ್ಲಿ ಅಗ್ನಿ ಅವಘಡ ಸಂಭವಿಸಿದ ಜಾಗದಲ್ಲೇ ಈ ಘಟನೆ ನಡೆದಿದೆ. ಬೆಂಕಿ ನಿಯಂತ್ರಣಕ್ಕೆ ಬಾರದ ಪರಿಣಾಮ ಬಸ್ ಟೈರ್‌ಗಳು ಹಾಗೂ ಡೀಸೆಲ್ ಟ್ಯಾಂಕ್‌ಗಳು ಸ್ಫೋಟಗೊಂಡಿವೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಎಸ್‌ವಿ ಕೋಚ್ ವರ್ಕ್ಸ್ ಗ್ಯಾರೇಜ್ ಅಲ್ಲಿ ಬೆಂಕಿ ತಗುಲಿದೆ. ಶ್ರೀನಿವಾಸ್ ಎಂಬುವವರಿಗೆ ಕೋಚ್ ವರ್ಕ್ಸ್ ಸೇರಿದ್ದು, 15 ವರ್ಷದಿಂದ ಕೋಚ್ ವರ್ಕ್ ಕೆಲಸಗಳು ನಡೆಯುತ್ತಿವೆ. ಇಂದು 11.30ರ ಸುಮಾರಿಗೆ ಬಸ್ ವೊಂದರ ಎಮರ್ಜನ್ಸಿ ಎಕ್ಸಿಟ್ ಬಳಿ ಕೆಲಸ ನಡೆಯುತಿತ್ತು. ಈ ವೇಳೆ ಬೆಂಕಿ ಕಾಣಿಸಿಕೊಂಡಿದೆ.
ಘಟನೆಯಲ್ಲಿ ಸದ್ಯಕ್ಕೆ 20ಕ್ಕೂ ಹೆಚ್ಚು ಬಸ್‌ಗಳು ಸುಟ್ಟು ಕರಕಲಾಗಿದ್ದು, ಯಾರೂ ಬೆಂಕಿಯಲ್ಲಿ ಸಿಲುಕಿಲ್ಲ. ಬಸ್‌ಗಳನ್ನು ರಿಪೇರಿ ಮಾಡುವ ಜಾಗದಲ್ಲಿ ಈ ಅನಾಹುತ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಗ್ಯಾರೇಜ್ ಸುಪರ್ ವೈಸರ್ ಮಾಹಿತಿ ನೀಡಿದ್ದಾರೆ.
ಈ ಹಿಂದೆ 2015ರಲ್ಲಿ ಕಾವೇರಿ ಗಲಾಟೆ ಸಂದರ್ಭದಲ್ಲಿ ಇದೇ ಜಾಗದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. 2015ರಲ್ಲಿ ತಮಿಳುನಾಡಿನ ಬಸ್‌ಗಳೆಂದು 25 ಬಸ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಲಾಗಿತ್ತು. ಯುವತಿಯೊಬ್ಬಳು ಬಸ್‌ಗಳಿಗೆ ಬೆಂಕಿ ಹಚ್ಚಿದ್ದು, ಬಳಿಕ ಆಕೆಯನ್ನು ಬಂಧಿಸಲಾಗಿತ್ತು.










