ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳಿದ್ದು, ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸುವ ದೃಷ್ಟಿಯಿಂದ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಘೋಷಿಸಿದೆ. ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಕಾರವಾರ ಮತ್ತು ಯಶವಂತಪುರ-ಮಂಗಳೂರು ಜಂಕ್ಷನ್ ನಿಲ್ದಾಣಗಳ ಮಧ್ಯೆ ಒಂದು ಟ್ರಿಪ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸುವ ಸಲುವಾಗಿ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಕಾರವಾರ ಮತ್ತು ಯಶವಂತಪುರ-ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ವಲಯವು ನಿರ್ಧರಿಸಿದೆ ಎಂದು ನೈಋತ್ಯ ರೈಲ್ವೆ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಣೆ ನೀಡಿದೆ.
ರೈಲು ಸಂಖ್ಯೆ 06597/06598 ಎಸ್‍ಎಂವಿಟಿ ಬೆಂಗಳೂರು – ಕಾರವಾರ, ಎಸ್‍ಎಂವಿಟಿ ಬೆಂಗಳೂರು ಎಕ್ಸ್‍ಪ್ರೆಸ್ ಸ್ಪೆಷಲ್ ವಿವರಗಳು ಈ ಕೆಳಗಿನಂತಿವೆ. ರೈಲು ಸಂಖ್ಯೆ 06597 ಅಕ್ಟೋಬರ್ 30 ರಂದು ಮಧ್ಯಾಹ್ನ 1 ಗಂಟೆಗೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಕಾರವಾರ ನಿಲ್ದಾಣವನ್ನು ತಲುಪಲಿದೆ. ರೈಲು ಸಂಖ್ಯೆ 06598 ಅಕ್ಟೋಬರ್ 31 ರಂದು ಮಧ್ಯಾಹ್ನ 12 ಗಂಟೆಗೆ ಕಾರವಾರ ನಿಲ್ದಾಣದಿಂದ ಹೊರಟು ಮರುದಿನ ಬೆಳಿಗ್ಗೆ 4 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಿಲ್ದಾಣವನ್ನು ತಲುಪಲಿದೆ. ಈ ವಿಶೇಷ ರೈಲು ಚಿಕ್ಕಬಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲಗಳಲ್ಲಿ ನಿಲುಗಡೆ ಹೊಂದಿರಲಿದೆ. ಈ ರೈಲಿನಲ್ಲಿ 4 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು, 10 ಸ್ವೀಪರ್ ಕ್ಲಾಸ್ ಬೋಗಿಗಳು, 2 ಎಸಿ 3 ಟಯರ್ ಬೋಗಿಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್/ಬ್ರೇಕ್ ವ್ಯಾನ್ಸ್ ಮತ್ತು ಅಂಗವಿಕಲರ ಬೋಗಿಗಳು ಸೇರಿದಂತೆ ಒಟ್ಟು 12 ಬೋಗಿಗಳು ಇರಲಿವೆ.










