ಬೆಂಗಳೂರು: ನಗರದ ಇಂದಿರಾನಗರದ ಪ್ರಸಿದ್ಧ ಹೊಟೆಲ್ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ವಸ್ತು ಸ್ಫೋಟವಾಗಿದೆ.
ಕೈ ತೊಳೆಯುವ ಜಾಗದಲ್ಲಿ ಸ್ಫೋಟ ಸಂಭವಿಸಿದೆ. ಸ್ಥಳದಲ್ಲಿ ಬ್ಯಾಟರಿ, ಬೋಲ್ಟ್‌ಗಳು ಪತ್ತೆಯಾಗಿದೆ. ಮಧ್ಯಾಹ್ನ 1:05ರ ವೇಳೆಗೆ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ರಾಮೇಶ್ವರಂ ಕೆಫೆ ಹಾನಿಯಾಗಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಪೋಟವಾಗುತ್ತಿದ್ದಂತೆಯೇ ಜನರು ಭಯಭೀತರಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
ನಿಗೂಢ ಸ್ಫೋಟದ ವೇಳೆ ಭಾರಿ ಪ್ರಮಾಣದ ಶಬ್ಧವಾಗಿದೆ. ಇದರಿಂದ ಜನರು ಒಂದು ಕ್ಷಣ ಭಯಭೀತರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿ ಶಾಮಕದಳ ಆಗಮಿಸಿದ್ದು ಬೆಂಕಿ ನಂದಿಸಿದ್ದಾರೆ. ಇನ್ನು ಈ ಸ್ಪೋಟದಲ್ಲಿ 5ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ.
ಎಸಿಪಿ ರೀನಾ ಸುವರ್ಣ ಮತ್ತು ಮಾರತ್ತಹಳ್ಳಿ ಪೊಲೀಸರು ಸಹ ಸ್ಥಳಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದ್ದಾರೆ. ಇನ್ನು ಹೋಟೆಲ್ ನ ಸಿಸಿಟಿವಿಗಳನ್ನು ಸಹ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.










