ಬೆಂಗಳೂರು : ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ…

180
First Suddi

ಬೆಂಗಳೂರು : ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಜೆಡಿಎಸ್‍ನ ಹಿರಿಯ ಸದಸ್ಯ ಬಸವರಾಜ್‌ ಹೊರಟ್ಟಿ ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಪ್ರತಾಪ್‍ಚಂದ್ರ ಶೆಟ್ಟಿ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಇಂದು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲದೊಂದಿಗೆ ಹೊರಟ್ಟಿ ಅವರು ಆಯ್ಕೆಯಾಗಿದ್ದಾರೆ.
ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರಿಂದ ಧರಣಿ ನಡೆಸಲಾಯಿತು. ಗೋ ಹತ್ಯೆ ನಿಷೇಧ ಕಾಯ್ದೆ ಮತ ವಿಭಜನೆಗೆ ಅವಕಾಶ ನೀಡದೇ ವಿಧೇಯಕ ಅಂಗೀಕರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್ ನಾಯಕರಾದ ನಾರಾಯಣಸ್ವಾಮಿ, ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈಗ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಿ ನಂತರ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಹಂಗಾಮಿ ಸಭಾಪತಿ ಪ್ರಾಣೇಶ್,ಅವರು ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸೋಣ ನಂತರ ದಾಖಲೆ ಪರಿಶೀಲನೆ ಮಾಡೋಣ ಎಂದರು. ಆದರೆ ಕಾಂಗ್ರೆಸ್ ಸದಸ್ಯರು ಧರಣಿ ಹಿಂಪಡೆಯಲು ನಿರಾಕರಿಸಿದರು. ಧರಣಿ ನಡುವೆಯೇ ಸಭಾಪತಿ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ನಜೀರ್ ಅಹ್ಮದ್ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ಧರಣಿ ಮುಂದುವರಿಸಿದ ಕಾಂಗ್ರೆಸ್ ಸದಸ್ಯರು ಸಭಾಪತಿ ಚುನಾವಣೆಯಿಂದ ದೂರ ಉಳಿದರು. ಈ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ ಎಂದು ಉಪ ಸಭಾಪತಿ ಎಂ.ಕೆ ಪ್ರಾಣೇಶ್ ಅವರು ಘೋಷಿಸಿದರು.
ಬಸವರಾಜ ಹೊರಟ್ಟಿ ಆಯ್ಕೆ ಬಹುತೇಕ ಖಚಿತವಾಗಿದ್ದ ಹಿನ್ನೆಲೆ ಕಲಾಪ ವೀಕ್ಷಿಸಲು ಹೊರಟ್ಟಿ ಪತ್ನಿ ಹೇಮಲತಾ ಹೊರಟ್ಟಿ, ಪುತ್ರರಾದ ವಸಂತ್ ಹೊರಟ್ಟಿ ಹಾಗೂ ಭರತ್ ಹೊರಟ್ಟಿ ಮತ್ತು ಕುಟುಂಬ ಸದಸ್ಯರು ಪ್ರೇಕ್ಷಕರ ಗ್ಯಾಲರಿಯಲ್ಲಿ ಉಪಸ್ಥಿತರಿದ್ದರು.