ಬೆಟ್ಟದ ಸಂದುವಿನಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸಿದ ಸೇನಾ ತಂಡ…

77
firstsuddi

ತಿರುವನಂತಪುರಂ : ಕೇರಳದ ಪಾಲಕ್ಕಾಡ್ ಬಳಿಯ ಮಲಂಪುಳ ಬೆಟ್ಟವೊಂದರ ಸಂದುವಿನಲ್ಲಿ ಸಿಲುಕಿಕೊಂಡಿದ್ದ ಯುವಕನನ್ನು ಭಾರತೀಯ ಸೇನೆ, ಪರ್ವತಾರೋಹಣ ತಂಡಗಳು ಹಾಗೂ ಎನ್‌ಡಿಆರ್‌ಎಫ್ ವಿಶೇಷ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ.

ಮಲಂಪುಳದ ಚೆರಾಡುವಿನ 23 ವರ್ಷದ ಆರ್.ಬಾಬು ಎಂಬಾತ ತನ್ನಿಬ್ಬರು ಸ್ನೇಹಿತರ ಜೊತೆಗೂಡಿ ಸೋಮವಾರ ಪಾಲಕ್ಕಾಡ್ ಸಮೀಪದ ಕುರುಂಬಚ್ಚಿ ಬೆಟ್ಟ ಏರಲು ತೆರಳಿದ್ದ. ಈ ವೇಳೆ ಬೆಟ್ಟ ಹತ್ತಿ ಇಳಿಯುವಾಗ ಕಾಲು ಜಾರಿ ಬಿದ್ದು, ಕಡಿದಾದ ಜಾಗದಲ್ಲಿ ಸಿಲುಕಿಕೊಂಡಿದ್ದ. ಆತ ಮೇಲೆ ಹತ್ತಿ ಬರುವಂತೆಯೂ ಇರಲಿಲ್ಲ. ಬಳ್ಳಿ, ದೊಣ್ಣೆ ಬಳಸಿ ಬಾಬು ಅವರನ್ನು ರಕ್ಷಿಸಲು ಗೆಳೆಯರು ನಡೆಸಿದ ಪ್ರಯತ್ನ ವ್ಯರ್ಥವಾಗಿದ್ದು, ಬಾಬು ಸ್ನೇಹಿತರು ಬೆಟ್ಟ ಇಳಿದು ಸ್ಥಳೀಯರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಯತ್ನ ಮಾಡಿದರು ಯುವಕನ ಸಮೀಪ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ ಸೋಮವಾರ ಕಾರ್ಯಾಚರಣೆ ಸ್ಥಗಿತ ಗೊಳಿಸಲಾಗಿತ್ತು. ನಿನ್ನೆ ಬೆಳಗ್ಗೆ ಕರಾವಳಿ ಕಾವಲು ಪಡೆಯ ಕಾಪ್ಟರ್ ಗಳು ಯುವಕನ ರಕ್ಷಣೆಗೆ ಧಾವಿಸಿತ್ತಾದರೂ, ಯುವಕ ಸಿಕ್ಕಿಬಿದ್ದ ಸ್ಥಳಕ್ಕೆ ಆತ್ಯಂತ ಕಡಿದಾಗಿದ್ದ ಕಾರಣ ಅಲ್ಲಿಗೆ ತೆರಳಲಾಗದೇ ಮರಳಿವೆ. ಹೀಗಾಗಿ ಸೋಮವಾರ ಬೆಳಗ್ಗಿಯಿಂದಲೂ ಯುವಕ ತಾನು ಕೂರಬಹುದಾದಷ್ಟೇ ಸಣ್ಣ ಜಾಗದಲ್ಲಿ ಸುಡು ಬಿಸಿಲು, ರಾತ್ರಿ ಚಳಿಯ ನಡುವೆ ಅನ್ನ, ನೀರು ಇಲ್ಲದೇ ಕುಳಿತಿದ್ದನು. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಯುವಕನ ರಕ್ಷಣೆಗಾಗಿ ಭಾರತೀಯ ಸೇನೆಯ ನೆರವು ಕೋರಿತು.

ಕೇರಳ ಸರ್ಕಾರದ ಮನವಿಯ ಮೇರೆಗೆ ಪರ್ವತಾರೋಹಣದಲ್ಲಿ ತರಬೇತಿ ಪಡೆದ ವೆಲಿಂಗ್ಟನ್ ನ ಮದ್ರಾಸ್ ರೆಜಿಮೆಂಟ್ ಸೆಂಟರ್‌ನಿಂದ ಒಂದು ತಂಡ ಮತ್ತು ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್ ಸೆಂಟರ್‌ನಿಂದ ಮತ್ತೊಂದು ತಂಡ ಮತ್ತು ಎನ್ ಡಿಆರ್ ಎಫ್ ಕಾರ್ಯಾಚರಣೆ ನಡೆಸಿ ಯುವಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ.