ನವದೆಹಲಿ : ಬೆಲೆ ಏರಿಕೆ ಖಂಡಿಸಿ ಸದನದೊಳಗೆ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ನಾಲ್ವರು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ. ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಜ್ಯೋತಿಮಣಿ, ರಮ್ಯಾ ಹರಿದಾಸ್ ಮತ್ತು ಟಿ ಎನ್ ಪ್ರತಾಪನ್ ಲೋಕಸಭೆಯ ಮಳೆಗಾಲ ಅಧಿವೇಶನದಿಂದ ಅಮಾನತುಗೊಂಡವರು. ಆಗಸ್ಟ್ 12ರ ವರೆಗೂ ನಡೆಯಲಿರುವ ಮುಂಗಾರು ಅಧಿವೇಶನದಿಂದ ಹೊರಗಿಡುವಂತೆ ಸಭಾಧ್ಯಕ್ಷ ಓಂ ಬಿರ್ಲಾ ಸೂಚಿಸಿದ್ದಾರೆ.
ಮುಂಗಾರು ಅಧಿವೇಶನದ 6ನೇ ದಿನವಾದ ಇಂದು ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಧಿವೇಶನ ನಡೆಯುತ್ತಿದ್ದ ವೇಳೆ ಕೈಯಲ್ಲಿ ಭಿತ್ತಿಪತ್ರ ಹಾಗೂ ಫಲಕ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದರು. ಇವರಿಗೆ ಸ್ಪೀಕರ್ ಓಂ ಬಿರ್ಲಾ ಈ ಹಿಂದೆ ಎಚ್ಚರಿಕೆ ನೀಡಿದ್ದರು. ಆದರೆ, ಇಂದು ಸಹ ಅದೇ ರೀತಿ ನಡೆದುಕೊಂಡಿದ್ದಾರೆ. ಹೀಗಾಗಿ, ಅಮಾನತು ಆದೇಶ ಹೊರಡಿಸಲಾಗಿದೆ.










