ಬೆಳ್ಳಂಬೆಳಿಗ್ಗೆ ಮನೆಗೆ ನುಗ್ಗಿದ ಮುಸುಕುಧಾರಿಗಳು- ತಾಯಿ, ಮಗಳಿಗೆ ಚಾಕು ತೋರಿಸಿ ದರೋಡೆ…

38
firstsuddi

ಬಂಟ್ವಾಳ: ನಾಲ್ವರು ಮುಸುಕುಧಾರಿಗಳು ಮನೆಯೊಂದರಲ್ಲಿ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ ನಗದನ್ನು ದೋಚಿ ಪರಾರಿಯಾದ ಘಟನೆ ಇಂದು ಬೆಳ್ಳಂಬೆಳಿಗ್ಗೆ ವಗ್ಗದಲ್ಲಿ ನಡೆದಿದೆ.

ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿರುವ ಪ್ಲೋರಿನ್ ಪಿಂಟೋ ಅವರ ಹೊಸ ಮನೆಯಿಂದ ದರೋಡೆ ಮಾಡಲಾಗಿದೆ.

ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೊ ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದು ಗಂಡಸರಿಲ್ಲದ ಮನೆಯಿಂದ ದರೋಡೆ ನಡೆಸಲಾಗಿದೆ.

ಬೀರುವಿನಲ್ಲಿರಿಸಲಾಗಿದ್ದ ಸುಮಾರು 2.90 ಲಕ್ಷ ರೂ. ಮೌಲ್ಯದ ವಿವಿಧ ಚಿನ್ನಾಭರಣಗಳು, 30 ಸಾವಿರ ನಗದು ಹಾಗೂ ಒಂದು ಮೊಬೈಲ್ ಪೋನ್ ಒಟ್ಟು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಗದು ದೋಚಿದ್ದಾರೆ.

ಇಂದು ಬೆಳಿಗ್ಗೆ ಸುಮಾರು 6.30 ರ ಸಮಯದಲ್ಲಿ ನಾಲ್ವರು ಮುಸುಕುಧಾರಿಗಳು ಬಂದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಇದರ ಅರಿವಿಲ್ಲದ ಮನೆಯವರು ಬಾಗಿಲು ತೆಗದು ನೋಡಿದಾಗ ನಾಲ್ವರು ಮುಸುಕುಧಾರಿಗಳು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿರುವ ನಗದು ಕೊಡುವಂತೆ ಬೆದರಿಸಿದ್ದಾರೆ. ಬೆದರಿಕೆಗೆ ಬಗ್ಗದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆ ಒಡ್ಡಿದಾಗ ಬೀರುವಿನ ಬೀಗದ ಕೀ ನೀಡಿದ್ದಾರೆ.

ಬಂಗಾರವನ್ನು ದೋಚುವ ವೇಳೆ ಅಡ್ಡ ಬಂದ ಮಗಳು ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿದೆ ಎಂದು ಇವರ ಅಣ್ಣ ವರದಿಗಾರ ಆಸ್ಟಿನ್ ಪಿಂಟೋ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಅಂಗಡಿಯೊಂದರಲ್ಲಿ ಜ್ಯೂಸ್ ಮೆಷಿನ್ ಒಂದನ್ನು ಕಳವು ಮಾಡಲಾಗಿತ್ತು. ಇಂದು ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಬೇಟಿ ನೀಡಿದ್ದಾರೆ. ಹಾಗೂ ಶ್ವಾನ ದಳ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.