ಬೆಳ್ಳಂ ಬೆಳಗ್ಗೆ ಅಧಿಕಾರಿಗಳಿಗೆ ಎಸಿಬಿ ಶಾಕ್ : ರಾಜ್ಯದ 11 ಜಿಲ್ಲೆಗಳ 28 ಕಡೆ ದಾಳಿ…

76
Firstsuddi

ಬೆಂಗಳೂರು : ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧ ಇಲಾಖೆಯ ಒಂಬತ್ತು ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಬೆಂಗಳೂರು, ಮೈಸೂರು, ಯಾದಗಿರಿ, ಬೆಳಗಾವಿ ಸೇರಿ ರಾಜ್ಯಾದ್ಯಂತ 11 ಜಿಲ್ಲೆಯ 28 ಸ್ಥಳಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನಲೆ ದಾಳಿ ನಡೆದಿದ್ದು, ದಾಖಲೆ ಪತ್ರಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಬೆಂಗಳೂರಿನ ಯಲಹಂಕ ಜೂನಿಯರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಭ್ರಮಣಿ ಅವರ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರಿನ ಗೋಕುಲಂ ಬಡಾವಣೆಯಲ್ಲಿರುವ ಚೆಸ್ಕಾಂ ಸೂಪರಿಂಟೆಂಡೆಂಟ್ ಇಂಜಿನಿಯರ್ ಮುನಿಗೋಪಾಲ್ ರಾಜು ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ನಗದು, ಆಭರಣ, ದುಬಾರಿ ಕೈಗಡಿಯಾರಗಳು ಮತ್ತು ಚಿನ್ನದ ಪಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿಯ ಉಪಮುಖ್ಯ ವಿದ್ಯುತ್ ಪರಿವೀಕ್ಷಕರ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಯಾದಗಿರಿ ನಗರದ ಸಹರಾ ಕಾಲೋನಿಯಲ್ಲಿರುವ ಜೆಸ್ಕಾಂ ಲೆಕ್ಕಾಧಿಕಾರಿ ರಾಜು ಪತ್ತಾರ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳೆದ 20 ವರ್ಷಗಳಿಂದ ಯಾದಗಿರಿ ಕೆಇಬಿ ಕಚೇರಿಯಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ರಾಜು ಪತ್ತಾರ್, ಆದಾಯಕ್ಕೂ ಮೀರಿ ಆಸ್ತಿ ಹೊಂದಿದ ದೂರುಗಳು ಕೇಳಿ ಬಂದಿವೆ. ಈ ಹಿನ್ನೆಲೆ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ 28 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 9 ಅಧಿಕಾರಿಗಳ ಮನೆ ಹಾಗೂ ಕಛೇರಿ ಮೇಲೆ ದಾಳಿ ನಡೆದಿದ್ದು, ಪರಿಶೀಲನೆ ನಡೆಯುತ್ತಿದೆ. ದಾವಣಗೆರೆ ವಿಭಾಗದ ಫ್ಯಾಕ್ಟರೀಸ್ ಮತ್ತು ಬಾಯ್ಲರ್‌ನ ಉಪನಿರ್ದೇಶಕ ಕೆ.ಎಂ. ಪ್ರಥಮ್, ಮೈಸೂರು ನಗರ ಯೋಜನೆಗಳ ಜಂಟಿ ನಿರ್ದೇಶಕ ಸುಬ್ರಮಣ್ಯ ಕೆ.ಯಾದವ್, ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನೆಗಳ ಕಿರಿಯ ಎಂಜಿನಿಯರ್ ಕೆ.ಸುಬ್ರಮಣ್ಯಂ, ಮೈಸೂರಿನ ಚೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮುನಿಗೋಪಾಲ ರಾಜ್, ಮೈಸೂರು ದಕ್ಷಿಣ ಸಾರಿಗೆ ಕಚೇರಿಯ ಪ್ರಥಮ ದರ್ಜೆ ಸಹಾಯಕ ಚನ್ನವೀರಪ್ಪ, ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ, ಬೆಳಗಾವಿ ವೃತ್ತದ ಉಪ ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್ ಹನುಮಂತ ಶಿವಪ್ಪ ಚಿಕ್ಕಣ್ಣ, ಯಾದಗಿರಿಯ ಜೆಸ್ಕಾಂ ಕಚೇರಿ ಲೆಕ್ಕಾಧಿಕಾರಿ ರಾಜು ಪತ್ತಾರ್, ಬಿಎಂಎಫ್‌ಟಿ ಪೊಲೀಸ್ ಇನ್‌ಸ್ಪೆಕ್ಟರ್ ವಿಕ್ಟರ್ ಸಿಮೊನ್.