ಬಾಗಲಕೋಟೆ : ಮೊಬೈಲ್ ನಲ್ಲಿ ಮಾತನಾಡುತ್ತಾ ಬೈಕ್ ಚಾಲನೆ ಮಾಡುತ್ತಿದ್ದ ವೇಳೆ ಹಂಪ್ಸ್ ಹಾರಿ ಹಿಂದೆ ಕುಳಿತಿದ್ದ ಯೋಧನ ಪತ್ನಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಮೂಗನೂರು ಗ್ರಾಮದ ಬಳಿ ನಡೆದಿದೆ. ಪುಷ್ಪಲತಾ(35) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಕರ್ತವ್ಯಕ್ಕೆ ತೆರಳಬೇಕಿದ್ದ ಯೋಧ ಶೇಖರಯ್ಯ ಅವರು ಪತ್ನಿ ಪುಷ್ಪಲತಾ ಅವರನ್ನು ತವರು ಮನೆಗೆ ಬಿಡಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಅವರ ಮಗ ವೀಡಿಯೋ ಕರೆಯನ್ನು ಮಾಡಿದ್ದು, ಈ ಹಿನ್ನೆಲೆ, ಶೇಖರಯ್ಯ ಅವರು ಕರೆಯನ್ನು ಸ್ವೀಕರಿಸಿ ಮಾತನಾಡುತ್ತಾ ಬೈಕ್ ಚಾಲನೆ ಮಾಡಿದ್ದಾರೆ. ಈ ವೇಳೆ ರಸ್ತೆಯಲ್ಲಿ ಇದ್ದ ಹಂಪ್ಸ್ ಅನ್ನು ಗಮನಿಸದೆ ಬೈಕ್ ಚಾಲನೆ ಮಾಡಿದ ಪರಿಣಾಮ ಹಿಂಬದಿ ಕುಳಿತಿದ್ದ ಪತ್ನಿ ಪುಷ್ಪಲತಾ ಅವರು ಬೈಕ್ ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದು, ಯೋಧ ಶೇಖರಯ್ಯ ಅವರು ರಸ್ತೆಯಲ್ಲೇ ಪತ್ನಿಯನ್ನು ಅಪ್ಪಿಕೊಂಡು ಕಣ್ಣೀರು ಹಾಕುತ್ತಿದ್ದ ದೃಶ್ಯ ಎಲ್ಲರ ಮನಕಲಕುವಂತಿತ್ತು. ಘಟನಾ ಸ್ಥಳಕ್ಕೆ ಅಮೀನಗಢ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










