ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನಾಯಕನ ಮಗ ಅರೆಸ್ಟ್.. ರಾಜ್ಯ ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆ ನೀಡಬೇಕು : ರಘುಪತಿ ಭಟ್

48
firstsuddi

ಉಡುಪಿ: ಶಿವಮೊಗ್ಗ ಬಾಂಬ್ ಟ್ರಯಲ್ ಮತ್ತು ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ತನಿಖೆಯನ್ನು ಮುಂದುವರಿಸಿದ್ದು, ಇಬ್ಬರು ಆರೋಪಿಗಳ ಹೇಳಿಕೆಯ ಆಧಾರದ ಮೇಲೆ ಉಡುಪಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ರೇಶಾನ್ ನನ್ನು ಬಂಧಿಸಿದೆ.

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಮುಖಂಡ ತಾಜುದ್ದೀನ್ ಶೇಖ್ ಅವರ ಮಗನನ್ನು ಎನ್ಐಎ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ತಾಜುದ್ದೀನ್ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶಿವಮೊಗ್ಗದ ಶಂಕಿತ ಉಗ್ರ ಮಾಝ್ ಮುನೀರ್ ಮತ್ತು ರೇಶಾನ್ ಒಂದೇ ಬ್ಯಾಚ್ ಮತ್ತು ರೂಮ್ ಮೇಟ್ ಆಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯೆ ನೀಡಿದ್ದು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಗನ ಬಂಧನವಾಗಿದೆ. ಒಂದೊಂದೇ ಆತಂಕಕಾರಿ ವಿಚಾರಗಳು ತನಿಖೆಯಲ್ಲಿ ಹೊರಗೆ ಬರುತ್ತಿದೆ. ಕರಾವಳಿಯಲ್ಲಿ ಇಂತಹ ನಿಗೂಢ ಚಟುವಟಿಕೆಗಳ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ನಲ್ಲಿ ತಾಜುದ್ದೀನ್ ಸಕ್ರಿಯ ಕಾರ್ಯಕರ್ತ. ಸಿದ್ದರಾಮಯ್ಯ, ಡಿಕೆಶಿ, ಯು ಟಿ ಖಾದರ್ ಪರಮಾಪ್ತ. ರಾಜ್ಯ ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಕಾಂಗ್ರೆಸ್ ಪಕ್ಷ ಇದರ ಜವಾಬ್ದಾರಿಯನ್ನು ಹೊರಬೇಕು. ಕಾಂಗ್ರೆಸ್ ಪ್ರಮೋಷನ್ ಕೊಟ್ಟು ಬ್ಲಾಕ್ ಅಧ್ಯಕ್ಷನನ್ನಾಗಿ ಮಾಡುತ್ತಾ? ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡುತ್ತಾರಾ ಎಂದು ಪ್ರಶ್ನೆ ಮಾಡಿದರು.

ರೇಶಾನ್ ತಾಯಿ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕಿ. ಆಕೆಯ ಮೇಲೆ ಲಿಖಿತ ದೂರನ್ನು ಕೆಲ ತಿಂಗಳ ಹಿಂದೆಯೇ ಶಿಕ್ಷಣ ಸಚಿವ ನಾಗೇಶ್ ಗೆ ನೀಡಲಾಗಿದೆ. ಕಾಲೇಜು ವಿರುದ್ಧವಾಗಿ ಹೇಳಿಕೆ ಕೊಡುವ ಆಡಿಯೋಗಳನ್ನು ಸಚಿವರಿಗೆ ಕೊಡಲಾಗಿದೆ. ತಾಜುದ್ದೀನ್ ಆರ್ಥಿಕ ಪರಿಸ್ಥಿತಿ ಈ ಹಿಂದೆ ಹದಗೆಟ್ಟಿತ್ತು. ಏಕಾಏಕಿ ಇತ್ತೀಚೆಗೆ ಶ್ರೀಮಂತನಾದ ಬಗ್ಗೆ ಸ್ಥಳೀಯರು ಗುಮಾನಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೂಡಾ ತನಿಖೆ ಆಗಬೇಕು ಎಂದು ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.