ಲಂಡನ್ : ಇಂಗ್ಲೆಂಡ್ ಪ್ರಧಾನಿ ಹುದ್ದೆ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಪ್ರಧಾನಿ ರೇಸ್ನಿಂದ ಹಿಂದೆ ಸರಿದಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಹೀಗಾಗಿ ಭಾರತೀಯ ಮೂಲದ ರಿಷಿ ಸುನಕ್ ಪ್ರಧಾನಿ ಗಾದಿಗೆ ಏರುವ ಹಾದಿ ಮತ್ತಷ್ಟು ಸುಗಮವಾದಂತಾಗಿದೆ.
ಔಪಚಾರಿಕವಾಗಿ ಇನ್ನೂ ತನ್ನ ಉಮೇದುವಾರಿಕೆಯನ್ನು ಘೋಷಿಸದ ಬೋರಿಸ್ ಜಾನ್ಸನ್ ಕೆಲವು ಉನ್ನತ ಮಟ್ಟದ ಕ್ಯಾಬಿನೆಟ್ ಸದಸ್ಯರನ್ನು ಒಳಗೊಂಡಂತೆ ಸುಮಾರು 59 ಟೋರಿ ಸಂಸದರ ಬೆಂಬಲವನ್ನು ಹೊಂದಿದ್ದರು. ಬ್ರಿಟನ್ ನ ಸ್ಥಳೀಯ ಕಾಲಮಾನ ಸೋಮವಾರದ ಮಧ್ಯಾಹ್ನ 2 ಗಂಟೆಯೊಳಗೆ ಅಭ್ಯರ್ಥಿಯನ್ನು ಘೋಷಿಸುವುದಾಗಿ ನಿರೀಕ್ಷಿಸಲಾಗಿದೆ. ಸೋಮವಾರ ಸಂಜೆಯೊಳಗೆ ಅವರನ್ನು ಟೋರಿ ನಾಯಕ ಮತ್ತು ಪ್ರಧಾನ ಮಂತ್ರಿ ಎಂದು ಘೋಷಿಸಲಾಗುತ್ತದೆ. ಒಂದುವೇಳೆ ಈ ರೇಸ್ ನಲ್ಲಿ ಇಬ್ಬರು ಅಭ್ಯರ್ಥಿಗಳಿದ್ದರೆ ಆನ್ ಲೈನ್ ಮತ ಚಲಾಯಿಸಲಾಗುತ್ತದೆ. ಶುಕ್ರವಾರದ ವೇಳೆಗೆ ಬ್ರಿಟನ್ ನ ನೂತನ ಪ್ರಧಾನಿಯನ್ನು ಘೋಷಿಸಲಾಗುತ್ತದೆ.
ಲಿಜ್ ಟ್ರಸ್ ಅಕ್ಟೋಬರ್ 20 ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಟ್ರಸ್ ಅವರು ಪ್ರಧಾನಿ ಹುದ್ದೆಯಲ್ಲಿದ್ದದ್ದು ಕೇವಲ 45 ದಿನಗಳು. ಇದು ಬ್ರಿಟನ್ ಪ್ರಧಾನಿಯೊಬ್ಬರ ಅತ್ಯಂತ ಕಡಿಮೆ ಅವಧಿ ಆಗಿದೆ.










