ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ – ಇಬ್ಬರ ಬಂಧನ…

62
firstsuddi

ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಎರಡು ಅನ್ಯಕೋಮಿನ ಯುವಕರು ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ತುಂಗಾ ನಗರದ ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ರಾತ್ರಿ ಜಿಲ್ಲೆಯ ಟಿಪ್ಪು ನಗರ ಮತ್ತು ದ್ರೌಪದಂ ವೃತ್ತದಲ್ಲಿ ಪ್ರತ್ಯೇಕ ಗಲಾಟೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಎರಡು ಪ್ರಕರಣದಲ್ಲಿ ಅನ್ಯ ಕೋಮಿನ ಯುವಕರೇ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಗಲಾಟೆ ನಡೆದ ಟಿಪ್ಪು ನಗರ ಹಾಗೂ ದ್ರೌಪದಂ ವೃತ್ತ ಸೇರಿದಂತೆ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಗೂಡ್ಸ್ ಆಟೋಗೆ ಬೈಕ್ ತಾಗಿದ ವಿಚಾರದಲ್ಲಿ ಅನ್ಯಕೋಮಿನ ಯುವಕರು ಮತ್ತು ಇಬ್ಬರು ಭಜರಂಗದಳ ಕಾರ್ಯಕರ್ತರಾದ ಜಿತೇಂದ್ರ (47), ಸಂದೇಶ (35) ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದು, ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುಂಗಾ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಶಿವಮೊಗ್ಗ ನಗರದ ಗೋಪಾಳದ ದ್ರೌಪದಂ ವೃತ್ತದಲ್ಲಿ ನಡೆದ ಘಟನೆಯಲ್ಲಿ, ಮಾತನಾಡುವ ನೆಪದಲ್ಲಿ ಕರೆಸಿ ಭರ್ಜಿಯಿಂದ ಚುಚ್ಚಲಾಗಿತ್ತು. ಮಾತನಾಡುವುದಿದೆ ಬಾ ಎಂದು ಭಜರಂಗದಳ ಕಾರ್ಯಕರ್ತ ವಿಜಯಕುಮಾರ್ ಎಂಬಾತನನ್ನು ಕರೆಸಿಕೊಂಡು ಹಲ್ಲೆ ಮಾಡಲಾಗಿತ್ತು. ನಂತರ ಎರಡು ಗುಂಪುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಬೈಕ್‍ನಲ್ಲಿ ವಾಪಸಾಗಲು ಮುಂದಾದ ವಿಜಯಕುಮಾರ್ ಗೆ ಭರ್ಜಿಯಿಂದ ಚುಚ್ಚಲಾಗಿತ್ತು. ಇದರಿಂದ ಗಾಯಗೊಂಡಿದ್ದ ವಿಜಯಕುಮಾರ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.