ಭಯೋತ್ಪಾದಕ ಚಟುವಟಿಕೆ: ಬಾಂಗ್ಲಾದೇಶದ ಪ್ರಜೆಗೆ ಜೈಲು ಶಿಕ್ಷೆ.

25

ಬೆಂಗಳೂರು: ಉಗ್ರ ಸಂಘಟನೆ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ ಚಟುವಟಿಕೆಗಳಿಗೆ ಉತ್ತೇಜನ ಡಿದ ಸರಣಿ ಪ್ರಕರಣಗಳಲ್ಲಿ ಬಾಂಗ್ಲಾದೇಶದ ಪ್ರಜೆ ಜಹೀದುಲ್ ಇಸ್ಲಾಂ ಅಲಿಯಾಸ್ ಕೌಸರ್‌ಗೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯ ನಿನ್ನೆ 7 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ನಿಧಿ ಸಂಗ್ರಹಿಸುವಿಕೆ, ಪಿತೂರಿ ಮತ್ತು ಡಕಾಯಿತಿ ಮತ್ತು ಮದ್ದುಗುಂಡುಗಳ ಖರೀದಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಹಿದುಲ್‍ಗೆ 57 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ. ಇದರೊಂದಿಗೆ ಈ ಪ್ರಕರಣಗಳಲ್ಲಿ ಒಟ್ಟು 11 ಆರೋಪಿಗಳಿಗೆ ಶಿಕ್ಷೆಯಾಗಿದೆ. ಎನ್‍ಐಎ ಕೋಲ್ಕತ್ತಾ ಶಾಖೆಯು ಬುದ್ರ್ವಾನ್ ಸ್ಫೋಟ ಪ್ರಕರಣ ಕುರಿತು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ದೊರೆತ ವರದಿ ಆಧಾರದ ಮೇಲೆ ಜೂನ್ 2019 ರಲ್ಲಿ ಬೆಂಗಳೂರು ನಗರ ಪೊಲೀಸರು ಆರಂಭಿಕವಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ನಂತರ ಎನ್‍ಐಎ ತನಿಖೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆಯನ್ನು ಆರಂಭಿಸಿದ್ದರು. ಬಾಂಗ್ಲಾದೇಶದಲ್ಲಿ 2005ರಲ್ಲಿ ನಡೆದ ಸರಣಿ ಸ್ಫೋಟಕ್ಕೆ ಸಂಬಂಧಿಸಿದ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡು 2014 ರಲ್ಲಿ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜೊತೆಗೆ ಪರಾರಿಯಾಗಿದ್ದ ಜಹೀದುಲ್ ಇಸ್ಲಾಂ ಭಾರತವನ್ನು ಪ್ರವೇಶಿಸಿದ್ದ ಎಂದು ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆಯ ತನಿಖೆಯಲ್ಲಿ ತಿಳಿದುಬಂದಿತ್ತು. ಸ್ಫೋಟದ ನಂತರ, ಜಹಿದುಲ್ ಮತ್ತು ಅವನ ಸಹಚರರು ಬೆಂಗಳೂರಿಗೆ ಬಂದಿದ್ದರು. ಇಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಮುಸ್ಲಿಂ ಯುವಕರನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ನೇಮಕ ಮಾಡಿದ್ದರು. ಆರೋಪಿಗಳು ಮತ್ತು ಆತನ ಸಹಚರರು 2018ರ ಜನವರಿಯಲ್ಲಿ ಬೋಧಗಯಾದಲ್ಲಿ ಸ್ಫೋಟ ನಡೆಸಿದ್ದರು. ಆರೋಪಿಗಳು ಉಗ್ರ ಚಟುವಟಿಕ ಮುಂದುವರೆಸಲು ಡಕಾಯಿತಿ ಮೂಲಕ ಹಣವನ್ನು ಸಂಗ್ರಹಿಸಲು ಸಂಚು ರೂಪಿಸಿದ್ದರು ಎಂದು ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆ ಇನ್ನಷ್ಟು ಮಾಹಿತಿ ಬಹಿರಂಗಪಡಿಸಿವೆ ಎಂದು ತಿಳಿಸಲಾಗಿದೆ.