ಭಾರತದ ಪ್ರಸಿದ್ಧ ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ.

34

ಹೈದರಾಬಾದ್: ಭಾರತೀಯ ಚಿತ್ರರಂಗದ ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ದೀರ್ಘಕಾಲದಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಬೆನಗಲ್ ಮುಂಬೈನ ವೊಕಾರ್ಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಅವರ ಪುತ್ರಿ ಪಿಯಾ ಬೆನಗಲ್ ಹೇಳಿದ್ದಾರೆ. ಶ್ಯಾಮ್ ಬೆನಗಲ್ ಅವರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. “ಹಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನನ್ನ ತಂದೆಯ ಆರೋಗ್ಯ ಇತ್ತೀಚೆಗೆ ತೀರಾ ಹದಗೆಟ್ಟಿತ್ತು. ಹೀಗಾಗಿ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಂಜೆ 6:38ಕ್ಕೆ ನಿಧನರಾದರು” ಎಂದು ಮಾಧ್ಯಮಗಳಿಗೆ ಪಿಯಾ ಬೆನಗಲ್ ತಿಳಿಸಿದ್ದಾರೆ. ಭಾರತೀಯ ಸಿನಿಮಾ ಚಳವಳಿಗೆ ನಾಂದಿ ಹಾಡಿದ್ದ ಶ್ಯಾಮ್ ಬೆನಗಲ್ ಪ್ರಸಿದ್ಧ ನಿರ್ದೇಶಕ ಮತ್ತು ಸಾಕ್ಷ್ಯಚಿತ್ರ ತಯಾರಕರಾಗಿದ್ದರು. 1970 ಮತ್ತು 80ರ ದಶಕದಲ್ಲಿ ಪ್ಯಾರಲಲ್ ಸಿನಿಮಾ ಪ್ರವರ್ತಕರಾಗಿ ಇವರು ಹೆಸರು ಮಾಡಿದ್ದರು. ವಿವಿಧ ಬಗೆಯ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಜೊತೆಗೆ ಸಂಕೀರ್ಣವಾದ ಸಾಮಾಜಿಕ ವಿಷಯಗಳನ್ನು ಪರದೆಯ ಮೇಲೆ ತರುತ್ತಿದ್ದ ಖ್ಯಾತಿ ಇವರದ್ದು. ‘ಅಂಕುರ್’ ನಿಶಾಂತ್’ ಮತ್ತು ‘ಮಂಥನ್’ ಚಿತ್ರಗಳಿಂದ ಇವರು ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ನಿರ್ದೇಶಕರಾಗಿ ಬೆಳೆಯಲು ಸಾಧ್ಯವಾಯಿತು. ಶ್ಯಾಮ್ ಬೆನಗಲ್ ಅವರ ಚಲನಚಿತ್ರಗಳಿಗಾಗಿ ಅನೇಕ ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಫಿಲ್ಮ್‍ಫೇರ್ ಪ್ರಶಸ್ತಿಗಳು ಸಿಕ್ಕಿವೆ. ಭಾರತ ಸರ್ಕಾರ ಇವರಿಗೆ ‘ಪದ್ಮಶ್ರೀ’ ‘ಪದ್ಮಭೂಷಣ’ ಪುರಸ್ಕಾರ ನೀಡಿ ಗೌರವಿಸಿದೆ. ಅಷ್ಟೇ ಅಲ್ಲದೇ, ಭಾರತೀಯ ಚಿತ್ರರಂಗದ ಅತ್ಯುನ್ನತ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೂ ಭಾಜನರಾಗಿದ್ದರು.