ಬೆಳಗಾವಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಸೋಮವಾರ ಮತ್ತೊಬ್ಬರು ಬಾಣಂತಿ ಮೃತಪಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ವೈಶಾಲಿ ಬಾಳಪ್ಪ ಜಿರಲಿ, ಎರಡು ದಿನ ಹಿಂದಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿ ಆರೋಗ್ಯವಾಗಿದ್ದರು. ಸೋಮವಾರ ಎದೆನೋವು ಎಂದು ಒದ್ದಾಡತೊಡಗಿದ್ದರು. ಈ ವೇಳೆ, ‘‘ಸರಿಯಾದ ಸಮಯಕ್ಕೆ ವೈದ್ಯರು ಬಂದಿಲ್ಲ. ಚೆನ್ನಾಗಿದ್ದ ವೈಶಾಲಿಗೆ ಯಾವ ಔಷಧ ನೀಡಿ ಈ ರೀತಿ ಆಗಿದೆ ಎಂಬುವುದು ತಿಳಿದಿಲ್ಲ.. ಆದರೆ ಕೆಲವೇ ಗಂಟೆಗಳಲ್ಲಿ ವೈಶಾಲಿ ಸಾವನ್ನಪ್ಪಿದ್ದಾರೆ’’ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ರಾತ್ರಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗಿದ್ದು, ಗೌಡವಾಡ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಹಾಗೂ ಬಿಮ್ಸ್ ಸಿಬ್ಬಂದಿ ನೀಡಿದ ಔಷಧಿ ಕಾರಣ ಎಂದು ಬೆಳಗಾವಿ ನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಮೃತಳ ಪತಿ ಬಾಳಪ್ಪ ದೂರು ದಾಖಲು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸೆಕ್ಷನ್ 170 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಎಪಿಎಂಸಿ ಠಾಣೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿನ ಬಳಿಕ ಬೆಳಗಾವಿಯಲ್ಲೂ ಅದೇ ರೀತಿ ಬಾಣಂತಿಯರ ಸಾವಾಗಿದ್ದು ಸಾಕಷ್ಟು ಭಯ ಹುಟ್ಟುವಂತೆ ಮಾಡಿದೆ. ಒಂದೆಡೆ ಕುಟುಂಬಸ್ಥರು, ಯಾವ ಔಷಧಿ ನೀಡಿದ್ದರು ಎಂಬ ಬಗ್ಗೆಯೂ ತನಿಖೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.









