ಚೆನ್ನೆ: ದೇಶದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಖ್ಯಾತಿ ಗಳಿಸಿದ್ದ ಕೃಷಿತಜ್ಞ ಎಂ.ಎಸ್. ಸ್ವಾಮಿನಾಥನ್ ಅವರು ಇಂದು ಮುಂಜಾನೆ 11.15ಕ್ಕೆ ತಮಿಳುನಾಡಿನ ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.
ಸ್ವಾಮಿನಾಥನ್ ಅವರು ವಯೋಸಹಜವಾಗಿ ಸಾವನ್ನಪ್ಪಿದ್ದಾರೆ. ಇವರ ಪತ್ನಿ ಮೀನಾ ಸ್ವಾಮಿನಾಥನ್ ಕಳೆದ ವರ್ಷವಷ್ಟೇ ಸಾವನ್ನಪ್ಪಿದ್ದರು. ಸ್ವಾಮಿನಾಥನ್ ಅವರು ಈಗ ಮೂವರು ಪುತ್ರಿಯರಾದ ಸೌಮ್ಯ ಸ್ವಾಮಿನಾಥನ್, ಮಥುರಾ ಸ್ವಾಮಿನಾಥನ್, ನಿತ್ಯಾ ಸ್ವಾಮಿನಾಥನ್ ಅವರನ್ನು ಅಗಲಿದ್ದಾರೆ.
1925 ಆಗಸ್ಟ್ 7 ರಂದು ತಮಿಳುನಾಡಿನ ಕುಂಬಕೋಣಂನಲ್ಲಿ ಜನಿಸಿದ ಸ್ವಾಮಿನಾಥನ್ ಅವರು ತಮ್ಮ ಸ್ವಂತ ಊರಿನಲ್ಲೇ ಶಿಕ್ಷಣವನ್ನು ಪೂರ್ಣ ಗೊಳಿಸಿದರು ಮತ್ತು ವೈದ್ಯರಾಗಲು ಬಯಸಿದ್ದರು. ಆದರೆ 1943ರಲ್ಲಿ ಬಂಗಾಳದಲ್ಲಿ ಕ್ಷಾಮವು ಅವರ ಜೀವನದ ಗುರಿಯನ್ನು ಬದಲಿಸಿತು. ಸುಮಾರು 30 ಲಕ್ಷ ಜನ ಹಸಿವಿನಿಂದ ಸಾವನ್ನಪ್ಪಿದ್ದನ್ನು ಕಂಡು ಕೃಷಿ ಸಂಶೋಧನೆಯಲ್ಲಿ ತೊಡಗಲು ತಮ್ಮ ಹಾದಿಯನ್ನು ತಿರುಗಿಸಿದರು.
ಸ್ವಾಮಿನಾಥನ್ ಅವರು ನಾರ್ಮನ್ ಬೋರ್ಲಾಗ್ ಮತ್ತು ಇತರ ವಿಜ್ಞಾನಿಗಳೊಂದಿಗೆ ಸೇರಿಕೊಂಡು 1960 ರ ದಶಕದಲ್ಲಿ ಭಾರತದಲ್ಲಿ ತೀವ್ರ ಧಾನ್ಯದ ಕೊರತೆ ಉಂಟಾದಾಗ, ಅವರು ಹೊಲಗಳಲ್ಲಿ ಸುಧಾರಿತ ಬೀಜಗಳನ್ನು ಬೆಳೆಸಿದರು ಮತ್ತು ರೈತರಿಗೆ ಹೆಚ್ಚಿನ ಇಳುವರಿ ಪಡೆಯುವ ಮಾರ್ಗವನ್ನು ತೋರಿಸಿದರು. ಅವರ ಕೊಡುಗೆಯ ಫಲವಾಗಿ ಕೇವಲ 25 ವರ್ಷಗಳಲ್ಲಿ ಭಾರತೀಯ ರೈತರನ್ನು ಕೃಷಿಯಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಿ ಹಸಿರು ಕ್ರಾಂತಿಯ ಹರಿಕಾರರೆನಿಸಿಕೊಂಡರು.
ಫಿಲಿಪೈನ್ಸ್‌ನ ಇಂಟರ್‌ನ್ಯಾಶನಲ್ ರೈಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಐಆರ್‌ಆರ್‌ಐ) ಡೈರೆಕ್ಟರ್ ಜನರಲ್ ಆಗಿ ಕೆಲಸ ಮಾಡಿದ್ದ ಸ್ವಾಮಿನಾಥನ್ ಅವರಿಗೆ 1987ರಲ್ಲಿ ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಮೊದಲ ಜಾಗತಿಕ ಆಹಾರ ಪ್ರಶಸ್ತಿಯ ಅತ್ಯುತ್ತಮ ಗೌರವವನ್ನು ನೀಡಲಾಯಿತು.










