ಜೈಪುರ : ಸ್ವದೇಶಿ ನಿರ್ಮಿತ ಮೊದಲ ಲಘು ಯುದ್ಧ ಹೆಲಿಕಾಪ್ಟರ್ ಅನ್ನು ಇಂದು ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಪ್ರಚಂಡ್ ಎಂದು ಹೆಸರಿಡಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಮತ್ತು ಇತರ ಹಿರಿಯ ಮಿಲಿಟರಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜೋಧ್ ಪುರ ಏರ್ ಫೋರ್ಸ್ ಸ್ಟೇಷನ್ ನಲ್ಲಿ ನಡೆದ ಸಮಾರಂಭದಲ್ಲಿ ಹೆಲಿಕಾಪ್ಟರ್ ಗಳನ್ನು ಐಎಎಫ್ ಗೆ ಸೇರ್ಪಡೆಗೊಳಿಸಲಾಯಿತು.
ಬೆಂಗಳೂರಿನಲ್ಲಿರುವ ಹೆಚ್ ಎಎಲ್ ಈ ಲಘು ಯುದ್ಧ ಹೆಲಿಕಾಪ್ಟರ್ ನಿರ್ಮಿಸಿದ್ದು, 5.8 ಟನ್ ತೂಕದ ಅವಳಿ-ಎಂಜಿನ್ LCH ಶಕ್ತಿ ಅನ್ನು ಈ ಹೆಲಿಕಾಪ್ಟರ್ ಹೊಂದಿದೆ. ಈ ವಿಶಿಷ್ಟ ಹೆಲಿಕಾಪ್ಟರ್ ಗೆ ಬೇಡಿಕೆ ಹೆಚ್ಚಿದ್ದು ಭಾರತೀಯ ವಾಯುಸೇನೆ 65 ಮತ್ತು ಭೂಸೇನೆ 95 ಹೆಲಿಕಾಪ್ಟರ್ ಗಳಿಗೆ ಬೇಡಿಕೆ ಇಟ್ಟಿದೆ. ವರ್ಷಕ್ಕೆ 30 ಹೆಲಿಕಾಪ್ಟರ್ ನಿರ್ಮಿಸುವ ಸಾಮರ್ಥ್ಯವಿದ್ದು ಆರಂಭಿಕವಾಗಿ 15 ಹೆಲಿಕಾಪ್ಟರ್ ಗಳನ್ನು ಸೇನೆಗೆ ಇಂದು ಹಸ್ತಾಂತರಿಸಲಾಗಿದೆ.
ಇದರ ವಿಶೇಷತೆ ಏನು?
ಈ ಹೆಲಿಕಾಪ್ಟರ್ ಗಳು ವೇಗ, ವಿಸ್ತೃತ ಶ್ರೇಣಿ, ಹೆಚ್ಚಿನ ಎತ್ತರದ ಕಾರ್ಯಕ್ಷಮತೆ, ಯುದ್ಧ ಹುಡುಕಾಟ ಮತ್ತು ಪಾರುಗಾಣಿಕಾ (CSAR), ಶತ್ರು ವಾಯು ರಕ್ಷಣಾ (DEAD) ವಿಧ್ವಂಸಕ ಪಾತ್ರವನ್ನು ನಿರ್ವಹಿಸಲು ಎಲ್ಲಾ ಹವಾಮಾನದ ಯುದ್ಧ ಸಾಮರ್ಥ್ಯವನ್ನು ಹೊಂದಿವೆ.
ಶಸ್ತ್ರ ಸಜ್ಜಿತ ರಕ್ಷಣಾ ವ್ಯವಸ್ಥೆಗಳನ್ನು ಹೊಂದಿದ್ದು ಇದು ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಬಲ್ಲದು ಮತ್ತು ನಿಧಾನವಾಗಿ ಸಾಗುವ ಶತ್ರು ವಿಮಾನಗಳ ಮೇಲೆ ಪ್ರತಿದಾಳಿ ಮಾಡುವ ವಿಶಿಷ್ಟತೆಯನ್ನು ಹೊಂದಿದೆ. ಇದು ರಾತ್ರಿ ಹೊತ್ತಿನಲ್ಲೂ ಕಾರ್ಯಾಚರಣೆ ಮಾಡುವ ಶಕ್ತಿ ಹೊಂದಿದ್ದು, ಕಾಡು, ಮಳೆ, ಹಿಮಪಾತದಂತಹ ಪ್ರಕೃತಿ ವೈಪರೀತ್ಯಗಳ ನಡುವೆ ಕ್ಷಮತೆಯಿಂದ ಕೆಲಸ ಮಾಡಬಲ್ಲದು. ಇದು ಶತ್ರು ದೇಶಗಳ ರೇಡಾರ್ ಕಣ್ಣು ತಪ್ಪಿಸಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ.










