ಭೀಕರ ಅಪಘಾತ – ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದ 6 ಭಕ್ತರು ದುರ್ಮರಣ…

48
firstsuddi

ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಂಚನೂರು ವಿಠಲ್ ದೇವಸ್ಥಾನದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳುತ್ತಿದ್ದ ಆರು ಭಕ್ತರು ಸಾವನ್ನಪ್ಪಿದ್ದಾರೆ. ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮದ ಹನಮವ್ವ ಮ್ಯಾಗಾಡಿ (25), ದೀಪಾ (31), ಸವಿತಾ (17), ಸುಪ್ರೀತಾ (11), ಮಾರುತಿ (42), ಇಂದ್ರವ್ವ (24) ಮೃತರು.

ಮೃತರೆಲ್ಲರೂ ಸವದತ್ತಿ ರೇಣುಕಾ ಯಲ್ಲಮ್ಮನ ದೇವಿ ದರ್ಶನಕ್ಕೆ ನಡೆದುಕೊಂಡು ಹೊರಟಿದ್ದರು. ಈ ವೇಳೆ ಬೊಲೆರೊ ವಾಹನದ ಚಾಲಕ ಡ್ರಾಪ್ ಕೊಡುವುದಾಗಿ ಹೇಳಿ ತನ್ನ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ಆಲದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಐವರು ಭಕ್ತರು ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಓರ್ವ ಮೃತಪಟ್ಟಿದ್ದಾರೆ. ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಸ್ಥಳದಲ್ಲೇ ಬಿಡುಬಿಟ್ಟಿರುವ ಬೆಳಗಾವಿ ಎಸ್ಪಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 6 ಯಾತ್ರಾರ್ಥಿಗಳ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ನೀಡುವುದಾಗಿ ಸಚಿವ ಗೋವಿಂದ ಕಾರಜೋಳ ಘೋಷಿಸಿದರು.

ಈ ಬಗ್ಗೆ ವೀಡಿಯೋ ಹೇಳಿಕೆ ನೀಡಿರುವ ಅವರು, ಸವದತ್ತಿಗೆ ಹೊರಟಿದ್ದಾಗ ಈ ಅವಘಡ ನಡೆದಿದ್ದು, ಮೃತ ಕುಟುಂಬದ ಜೊತೆಗಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಸೂಚಿಸಿದರು. ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಪ್ರಕಟಿಸಿದ್ದೇನೆ. ಇನ್ನೂ ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಡಿಎಚ್ಒ ಜೊತೆಗೂ ಮಾತನಾಡಿದ್ದೇನೆ ಎಂದರು.