ರಾಯ್‌ಪುರ: ಛತ್ತೀಸ್ ಗಢದಲ್ಲಿ ಪಿಕಪ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ, 11 ಮಂದಿ ಮೃತಪಟ್ಟಿದ್ದಾರೆ.
ರಸ್ತೆ ಅಪಘಾತದಲ್ಲಿ ಸುಮಾರು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭಟಪಾರಾ ಆಸ್ಪತ್ರೆ ಮತ್ತು ಬಲೋಡಾ ಬಜಾರ್ ಗೆ ದಾಖಲಿಸಲಾಗಿದೆ. ತಡರಾತ್ರಿ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಭಟಪಾರಾ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಮೃತ ಪಟ್ಟವರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದು ಎಸ್ ಐ ಸಂಜೀವ್ ಸಿಂಗ್ ರಜಪೂತ್ ತಿಳಿಸಿದ್ದಾರೆ.
ಪಿಕಪ್ ವಾಹನದಲ್ಲಿದ್ದ ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಖಿಲೋರಾ ಗ್ರಾಮದಿಂದ ಅರ್ಜುನಿ ಗ್ರಾಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಸಂಬಂಧಿಕರು ಪಿಕಪ್ ವಾಹನದಲ್ಲಿ ಅರ್ಜುನಿಯಿಂದ ತಮ್ಮ ಗ್ರಾಮ ಖಿಲೋರಾಗೆ ಹಿಂತಿರುಗುತ್ತಿದ್ದರು. ರಾತ್ರಿ 12 ಗಂಟೆ ಸುಮಾರಿಗೆ ಖಮಾರಿಯಾದ ಡಿಪಿಡಬ್ಲ್ಯುಎಸ್ ಶಾಲೆಯ ಬಳಿ ವೇಗವಾಗಿ ಬಂದ ಟ್ರಕ್ ಮತ್ತು ಪಿಕಪ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಪಿಕಪ್ ವಾಹನ ಉರುಳಿ ಬಿದ್ದಿತ್ತು. ಅಪಘಾತದಲ್ಲಿ 4 ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಿಲ್ಲಾಸ್ಪತ್ರೆ ಹಾಗೂ ಇತರ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಮೂವರು ಗಾಯಾಳುಗಳನ್ನು ರಾಯ್ ಪುರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.










