ಭಾರತದ ಹರ್ನಾಜ್ ಸಂಧುಗೆ ಒಲಿದ ಭುವನ ಸುಂದರಿ ಪಟ್ಟ…

80
firstsuddi

ನವದೆಹಲಿ : 2021ರ ಭುವನ ಸುಂದರಿ ಪಟ್ಟ ಪಂಜಾಬ್ ಮೂಲದ ಹರ್ನಾಜ್ ಸಂಧುಗೆ ಒಲಿದಿದೆ. ಇಸ್ರೇಲ್ ನ ಐಲಾಟ್ ನಲ್ಲಿ ನೆರವೇರಿದ 70ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಹರ್ನಾಜ್ ಕೌರ್ ಸಂಧು(21) ವಿಶ್ವ ಸುಂದರಿ ಪಟ್ಟದ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪರಾಗ್ವೆಯ 22 ವರ್ಷದ ನಾಡಿಯಾ ಫೆರೇರಾ ಎರಡನೇ ಸ್ಥಾನ ಪಡೆದರೆ, ದಕ್ಷಿಣ ಆಫ್ರಿಕಾದ 24 ವರ್ಷದ ಲಲೆಲಾ ಮಸ್ವಾನೆ ಮೂರನೇ ಸ್ಥಾನ ಪಡೆದರು.

ಸಂಧು ಅವರಿಗಿಂತ ಮೊದಲು ಇಬ್ಬರು ಭಾರತೀಯರು ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ನಟಿ ಸುಶ್ಮಿತಾ ಸೇನ್ 1994 ರಲ್ಲಿ ಮತ್ತು ಲಾರಾ ದತ್ತಾ 2000 ರಲ್ಲಿ ಭುವನ ಸುಂದರಿ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು. ಇದೀಗ ಬರೋಬ್ಬರಿ 21 ವರ್ಷಗಳ ನಂತರ ಭಾರತಕ್ಕೆ ವಿಶ್ವ ಸುಂದರಿ ಪಟ್ಟ ದೊರೆತಿದೆ.

ಟಾಪ್ ಮೂರು ಸುತ್ತುಗಳಲ್ಲಿ ಸ್ಪರ್ಧಿಗಳಿಗೆ ಇಂದಿನ ಮಹಿಳೆಯರು ಎದುರಿಸುತ್ತಿರುವ ಒತ್ತಡಗಳನ್ನು ಹೇಗೆ ನಿಭಾಯಿಸಬಹುದು ಎಂದು ನೀವು ಹೇಳುತ್ತೀರಿ ಎಂದು ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಭಾರತದ ಹರ್ನಾಜ್ ಸಂಧು, ಇಂದಿನ ಯುವಜನತೆ ಎದುರಿಸುತ್ತಿರುವ ದೊಡ್ಡ ಒತ್ತಡವೆಂದರೆ ತಮ್ಮಲ್ಲಿ ನಂಬಿಕೆ ಇಡಬೇಕಾಗಿರುವುದಾಗಿದೆ. ನಿಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ, ಪ್ರಪಂಚದಾದ್ಯಂತ ನಡೆಯುತ್ತಿರುವ ಹೆಚ್ಚು ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡೋಣ. ಮನೆಯಿಂದ ಆಚೆ ಬನ್ನಿ, ನಿಮ್ಮ ಬಗ್ಗೆ ಯೋಚನೆ ಮಾಡಿ, ನಿಮ್ಮ ಜೀವನಕ್ಕೆ ನೀವೇ ನಾಯಕರು, ನಿಮಗೆ ನೀವೇ ಧ್ವನಿಯಾಗಬೇಕು. ನಾನು ನನ್ನ ಮೇಲೆ ನಂಬಿಕೆ ಇಟ್ಟಿರುವುದರಿಂದ ಇಂದು ಇಲ್ಲಿ ನಿಂತಿದ್ದೇನೆ ಎಂದು ಹೇಳಿದರು.