ಭ್ರಷ್ಟಾಚಾರ ಆರೋಪ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು ದಾಖಲು…

41
firstsuddi

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ 600 ಕೋಟಿಗೂ ಹೆಚ್ಚು ಮೌಲ್ಯದ ಭ್ರಷ್ಟಾಚಾರದ ಆರೋಪ ಮಾಡಲಾಗಿದ್ದು, ಮಕ್ಕಳ ಪೌಷ್ಠಿಕ ಆಹಾರ ಸರಬರಾಜಿನಲ್ಲಿ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅನರ್ಹಗೊಂಡಿರುವ ಸಹಕಾರ ಸಂಸ್ಥೆಗಳಿಂದ ಅಂಗನವಾಡಿಗಳಿಗೆ ಪೌಷ್ಠಿಕ ಆಹಾರ ಸರಬರಾಜು ಮಾಡುವ ಟೆಂಡರ್ ನೀಡಿದ ಆರೋಪವನ್ನು ಸಚಿವರ ವಿರುದ್ಧ ಮಾಡಲಾಗಿದೆ.

ಬ್ಲ್ಯಾಕ್ ಲಿಸ್ಟ್​ನಲ್ಲಿರುವ ಕ್ರಿಸ್ಟಿ ಫ್ರೈಡ್ ಗ್ರಾಮ್ ಕಂಪನಿ ಜೊತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಇಲಾಖೆ ಅಧಿಕಾರಿಗಳು ಶಾಮೀಲು ಆರೋಪ ಮಾಡಲಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ವಕೀಲ ನಟರಾಜ ಶರ್ಮಾ ದೂರು ನೀಡಿದ್ದಾರೆ.

ಗುತ್ತಿಗೆದಾರರಿಂದ ಅಂಗನವಾಡಿಗಳಿಗೆ ಪೂರೈಕೆಯಾಗುವ ಆಹಾರ ಗುಣಮಟ್ಟ ಇರುವುದಿಲ್ಲ. ಹೀಗಾಗಿ ಸ್ಥಳೀಯ ಸಂಘಗಳೇ ಆಹಾರ ಪೂರೈಕೆ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಆದೇಶ ಉಲ್ಲಂಘನೆ ಮಾಡಿ ಬ್ಲಾಕ್ ಲಿಸ್ಟ್ ನಲ್ಲಿರುವ ಕಂಪನಿಗೆ ಟೆಂಡರ್ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಜೆ.ಸಿ ಪ್ರಕಾಶ್ ಹಾಗೂ ನಿರ್ದೇಶಕರ ವಿರುದ್ಧ ದೂರು ನೀಡಲಾಗಿದೆ.