ಭ್ರಷ್ಟಾಚಾರ ನಿಗ್ರಹ ದಳ ರಚನೆ ರದ್ದು – ಹೈಕೋರ್ಟ್ ಮಹತ್ವದ ಆದೇಶ…

86
firstsuddi

ಬೆಂಗಳೂರು : ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಯನ್ನು ರದ್ದುಪಡಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಎಸಿಬಿ ರಚನೆ ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ, ಸಮಾಜ ಪರಿವರ್ತನ ಸಮುದಾಯ ಸೇರಿದಂತೆ ಹಲವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ವೀರಪ್ಪ ಮತ್ತು ಕೆ.ಎಸ್. ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠ, ಲೋಕಾಯುಕ್ತಕ್ಕೆ ಪೊಲೀಸ್ ಠಾಣೆ ಸ್ಥಾನಮಾನವನ್ನು ಮರುಸ್ಥಾಪಿಸಿದ್ದು, ಎಸಿಬಿಯು ಲೋಕಾಯುಕ್ತ ಸಂಸ್ಥೆಯ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಅಗತ್ಯವಿದೆ. ಮೂರು ವರ್ಷದ ಅವಧಿಗೆ ಅಧಿಕಾರಿಗಳ ನೇಮಕವಾಗಬೇಕು. ಲೋಕಾಯುಕ್ತರ ನೇಮಕ ವೇಳೆ ಅರ್ಹತೆ ಪರಿಗಣಿಸಬೇಕು. ಜಾತಿ ಆಧರಿಸಿ ಲೋಕಾಯುಕ್ತ, ಉಪಲೋಕಾಯುಕ್ತ ನೇಮಕವಾಗಬಾರದು. ಭ್ರಷ್ಟಾಚಾರ ಆರೋಪ ಹೊತ್ತವರು ಪಾರಾಗಬಾರದು. ಹೀಗಾಗಿ ಲೋಕಾಯುಕ್ತ ಪೊಲೀಸರೇ ತನಿಖೆ ಮುಂದುವರಿಸಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ದಾಖಲಾಗುವ ಪ್ರಕರಣ ತನಿಖೆಗೆ ಎಸಿಬಿಯನ್ನು ರಚನೆ ಮಾಡಿ 2016ರ ಮಾರ್ಚ್ 14ರಂದು ಅಂದಿನ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. 2016ರ ಮಾರ್ಚ್ 19ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅಪರಾಧ ದಾಖಲು ಮತ್ತು ತನಿಖೆಗೆ ಸಂಬಂಧಿಸಿದಂತೆ ಇದ್ದ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಂದ ಹಿಂಪಡೆದು ಆದೇಶಿಸಲಾಗಿತ್ತು. ಆದರೆ ನಂತರದಲ್ಲಿ ಈ ಆದೇಶಗಳನ್ನು ಪ್ರಶ್ನಿಸಿ 2016ರಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಮಹತ್ವದ ಆದೇಶವನ್ನು ನೀಡಿದೆ.