ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯಬಾರದು : ಸಿದ್ದರಾಮಯ್ಯ.

339
firstsuddi

ಬೆಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಆದಿತ್ಯ ರಾವ್‍ನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಮಂಗಳೂರು ವಿಮಾನನಿಲ್ದಾಣಕ್ಕೆ ಬಾಂಬು ಇಟ್ಟಿರುವ ಆರೋಪಿ ಆದಿತ್ಯರಾವ್ ಎಂಬವನ ಬಗ್ಗೆ ನಿಷ್ಪಕ್ಷಪಾತವಾಗಿ ನಡೆಸಿ ಸತ್ಯ ಸಂಗತಿಯನ್ನು ಬಯಲಿಗೆಳೆಯಬೇಕು ಆತನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯಬಾರದು. ನಿರ್ದಿಷ್ಟ ಸಮುದಾಯದ ಬಗ್ಗೆ ಪೂರ್ವಗ್ರಹ ಹೊಂದಿರುವಸಂಘ ಪರಿವಾರದ ನಾಯಕರು ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಸಾಮಾನ್ಯ ಅಪರಾಧ ಪ್ರಕರಣಗಳಿಗೂ ಕೋಮುಬಣ್ಣ ಬಳಿಯುತ್ತಿರುವುದೇ ಅಲ್ಲಿನ ಶಾಂತಿ ವ್ಯವಸ್ಥೆ ಕದಡಲು ಕಾರಣ. ತಮ್ಮ ಅಜೆಂಡಾಕ್ಕೆ ಬಳಸಲಾಗದ ಪ್ರಕರಣಗಳ ಬಗ್ಗೆ ಅವರ ಮೌನವೇ ಅವರ ದುರುದ್ದೇಶಕ್ಕೆ ಸಾಕ್ಷಿ. ಪೊಲೀಸರು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯಲು ಹೋಗದೆ ವೃತ್ತಿಪರತೆಯಿಂದ ಕೆಲಸ ಮಾಡಬೇಕು. ಮಂಗಳೂರು ಪೊಲೀಸರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅನಗತ್ಯವಾಗಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲು ಕಾರಣವಾಗುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.