ಮಂಗಳೂರು: ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪ್ರಕರಣ- ಸ್ಥಳ ಮಹಜರು ಮಾಡಿದ ಪೊಲೀಸರು…

185
firstsuddi

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯ ರಾವ್ ಕೃತ್ಯ ನಡೆಸಿದ ಸ್ಥಳಗಳನ್ನು ಪೊಲೀಸರು ಶುಕ್ರವಾರ ಮಧ್ಯಾಹ್ನ ಮಹಜರು ನಡೆಸಿದರು. ಶಂಕಿತ ಉಗ್ರ ಆದಿತ್ಯ ರಾವ್ ನಿಲ್ದಾಣದ ಮುಖ್ಯ ದ್ವಾರದ ಬಳಿ (ಕೆಂಜಾರು) ಬಸ್‌ನಿಂದ ಇಳಿದ ಪ್ರದೇಶದಿಂದ ಆರಂಭವಾದ ಮಹಜರು ಪ್ರಕ್ರಿಯೆ ಬಳಿಕ ಸಲೂನ್ ಮಳಿಗೆ ಸಮೀಪ ಬ್ಯಾಗ್ ಇಟ್ಟ ಸ್ಥಳವನ್ನು ಖಚಿತಪಡಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ನಿಲ್ದಾಣದ ಪಾರ್ಕಿಂಗ್ ಸ್ಥಳದ ಮೂಲಕ ನೇರವಾಗಿ ಟಿಕೆಟ್ ಕೌಂಟರ್ ಸಮೀಪದ ಕಪ್ಪು ಬಣ್ಣದ ಸಾಲು ಕುರ್ಚಿಗಳೊಂದರ ಮೇಲೆ ಸ್ಫೋಟಕವಿದ್ದ ಬ್ಯಾಗ್ ಇರಿಸಿದ್ದ ಜಾಗವನ್ನು ತೋರಿಸಿದನು. ಬಳಿಕ ಎಸ್ಕಲೇಟರ್ ಮೂಲಕ ಇಳಿದುಕೊಂಡು ಹೊರ ನಡೆದ ಜಾಗವನ್ನು ತನಿಖಾ ತಂಡಕ್ಕೆ ತಿಳಿಸಿದನು ಎಂದು ಅವರು ಮಾಹಿತಿ ನೀಡಿದ್ದಾರೆ. ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಹಾಗೂ ತನಿಖಾಧಿಕಾರಿಯಾದ ಬೆಳ್ಳಿಯಪ್ಪ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಯಿತು.