ಶ್ರೀನಗರ : ಜಮ್ಮು ಕಾಶ್ಮೀರಾದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥನನ್ನು ಹೊಡೆದುರುಳಿಸಿದ್ದಾರೆ. ಇಂದು ಬೆಳಗ್ಗಿನ ಜಾವ ಪುಲ್ವಾಮಾದ ಝೈನ್ ಟ್ರಾಗ್ ಗ್ರಾಮದಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕೆಲ ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ತಿಳಿದ ಭದ್ರತಾ ಪಡೆ ಕಾರ್ಯಚರಣೆ ನಡೆಸಿದ್ದು, ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಪ್ರತಿದಾಳಿ ನಡೆಸಿದ ಯೋಧರು ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಸೈಫುಲ್ಲಾ ಎಂಬುವವರನ್ನು ಹೊಡೆದುರುಳಿಸಿದ್ದು, ಉಗ್ರನ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಇನ್ನುಳಿದ ಉಗ್ರರಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.










