ಮಂಡ್ಯ : ಕೊಲೆಯಾದ ಮಹಿಳೆಯರಿಬ್ಬರ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ…

56
firstsuddi

ಮಂಡ್ಯ : ಜಿಲ್ಲೆಯಲ್ಲಿ ಹೊಟ್ಟೆಯಿಂದ ಕೆಳಭಾಗ ಕತ್ತರಿಸಿದ ಇಬ್ಬರು ಮಹಿಳೆಯರ ಮೃತದೇಹಗಳು ಪತ್ತೆಯಾಗಿದ್ದವು. ಮಹಿಳೆಯರ ಬರ್ಬರ ಹತ್ಯೆ ಕಂಡು ಸಕ್ಕರೆನಾಡಿನ ಜನತೆ ಬೆಚ್ಚಿಬಿದ್ದಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ವಿಳಾಸ ಹಾಗೂ ಆರೋಪಿಗಳ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ ಬಹುಮಾನ ನೀಡುವುದಾಗಿ ಜಿಲ್ಲಾ ಪೊಲೀಸ್ ಇಲಾಖೆ ಘೋಷಣೆ ಮಾಡಿದೆ.

ಜೂ.7ರಂದು ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಸಮೀಪ ಕೆರೆಯಲ್ಲಿ ಸುಮಾರು 30 ರಿಂದ 32 ವರ್ಷದ ಮಹಿಳೆಯ ಶವ ಪತ್ತೆಯಾಗಿತ್ತು. ಹಾಗೇ ಶ್ರೀರಂಗಪಟ್ಟಣ ತಾಲೂಕು ಮಾಡರಹಳ್ಳಿ ರಸ್ತೆಯ ಬಳಿ ಸಿಡಿಎಸ್ ನಾಲಿಗೆ ಸಂಪರ್ಕಿಸುವ ಸಾರೋಡು ಹಳ್ಳದ ಪಕ್ಕದ ಜಮೀನಿನಲ್ಲಿ 40 ರಿಂದ 45 ವರ್ಷ ಮಹಿಳೆಯ ಶವ ಸಿಕ್ಕಿತ್ತು. ಈ ಇಬ್ಬರನ್ನು ಬೇರೆಡೆ ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಶವಗಳನ್ನು ಕತ್ತರಿಸಿ ಎರಡೂ ದೇಹದ ಅರ್ಧಭಾಗವನ್ನು ನೀರಿನಲ್ಲಿ ಬೀಸಾಡಿ ಹೋಗಲಾಗಿತ್ತು.

ಈ ಪ್ರಕರಣ ಪೋಲಿಸರಿಗೆ ಈಗ ಕಗ್ಗಂಟಾಗಿ ಪರಿಣಮಿಸಿದೆ. ಈಗಾಗಲೇ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಪೊಲೀಸರು ಕರಪತ್ರದ ಮೂಲಕ, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕೊಲೆಯಾಗಿರುವ ಮಹಿಳೆಯರ ಬಗ್ಗೆ ಹಾಗೂ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ಮಾಡಿದ್ರು. ಆದ್ರೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಪ್ರಕರಣ ಸಂಬಂಧ ಮಹಿಳೆಯರ ವಿಳಾಸ, ಗುರುತು ಹಾಗೂ ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ನೀಡಲಾಗುವುದು. ಅಂತೆಯೇ ಇಲಾಖೆಗೆ ನೀಡುವ ಮಾಹಿತಿಗಳ ಗೌಪ್ಯತೆ ಕಾಪಾಡಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.