ಮಕ್ಕಳು ಬೆಳಗ್ಗೆ 7 ಗಂಟೆಗೆ ಶಾಲೆಗೆ ಹೋಗಬಹುದಾದರೆ, ನ್ಯಾಯಾಧೀಶರೇಕೆ 9 ಗಂಟೆಗೆ ಕೆಲಸ ಪ್ರಾರಂಭಿಸಬಾರದು?

92
firstsuddi

ನವದೆಹಲಿ : ಮಕ್ಕಳು ಬೆಳಗ್ಗೆ 7 ಗಂಟೆಗೆ ಶಾಲೆಗೆ ಹೋಗಬಹುದಾದರೆ, ನ್ಯಾಯಾಧೀಶರು ಮತ್ತು ವಕೀಲರು ತಮ್ಮ ದಿನವನ್ನು 9 ಗಂಟೆಗೆ ಏಕೆ ಪ್ರಾರಂಭಿಸಬಾರದು? ಎಂದು ಸುಪ್ರೀಂ ಕೋರ್ಟ್ ನ ಮುಂದಿನ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಅವರು ಪ್ರಶ್ನಿಸಿದ್ದಾರೆ.

ಆಗಸ್ಟ್ ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಲಿರುವ ನ್ಯಾಯಮೂರ್ತಿ ಲಲಿತ್ ಇಂದು ಬೆಳಗ್ಗೆ 9.30ಕ್ಕೆ ವಿಚಾರಣೆಯ ಕೆಲಸ ಆರಂಭಿಸಿದರು. ಸಾಮಾನ್ಯವಾಗಿ ಸುಪ್ರೀಂ ಕೋರ್ಟ್ನಲ್ಲಿ ಬೆಳಗ್ಗೆ 10.30 ಕ್ಕೆ ವಿಚಾರಣೆಗಳು ಆರಂಭವಾಗುತ್ತವೆ. ಬೆಳಗ್ಗೆ ಬೇಗ ವಿಚಾರಣೆ ಆರಂಭಿಸಿದ್ದಕ್ಕೆ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಸಂತಸ ವ್ಯಕ್ತಪಡಿಸಿದ್ದರು. ಈ ವೇಳೆ ನ್ಯಾಯಮೂರ್ತಿ ಯು.ಯು.ಲಲಿತ್ ಮಕ್ಕಳು ಬೆಳಗ್ಗೆ 7 ಗಂಟೆಯಿಂದಲೇ ಶಾಲೆಗೆ ಹೋಗಬಹುದಾದರೆ ನ್ಯಾಯಾಧೀಶರು ಹಾಗೂ ವಕೀಲರು ತಮ್ಮ ದಿನವನ್ನು ಏಕೆ 9 ಗಂಟೆಗೆ ಪ್ರಾರಂಭಿಸಬಾರದು? ಎಂದು ಪ್ರಶ್ನಿಸಿದರು. ಕೋರ್ಟ್ ಸಂಖ್ಯೆ 2 ರಲ್ಲಿ ಇಂದು ನ್ಯಾ.ಲಲಿತ್ ಅವರೊಂದಿಗೆ ನ್ಯಾ.ಎಸ್. ರವೀಂದ್ರ ಮತ್ತು ಸುಧಾಂಶು ಧುಲಿಯಾ ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಂಡರು.

ವಾರದಲ್ಲಿ 5 ದಿನಗಳವರೆಗೆ, ಸುಪ್ರೀಂ ಕೋರ್ಟ್ನ ನ್ಯಾಯಾಧೀಶರು ಬೆಳಿಗ್ಗೆ 10.30ಕ್ಕೆ ಪ್ರಕರಣಗಳ ವಿಚಾರಣೆಯನ್ನು ಪ್ರಾರಂಭಿಸುತ್ತಾರೆ. ಸಂಜೆ 4ರ ವರೆಗೆ ಕುಳಿತುಕೊಳ್ಳುತ್ತಾರೆ. ಮಧ್ಯಾಹ್ನ 1 ರಿಂದ 2ರ ವರೆಗೆ ಒಂದು ಗಂಟೆಯ ಊಟದ ವಿರಾಮ ತೆಗೆದುಕೊಳ್ಳುತ್ತಾರೆ. ಇನ್ನು ಮುಂದೆ ಸುದೀರ್ಘ ವಿಚಾರಣೆ ಅಗತ್ಯವಿಲ್ಲದಿದ್ದಾಗ ಸುಪ್ರೀಂ ಕೋರ್ಟ್ ಬೆಳಿಗ್ಗೆ 9 ಗಂಟೆಗೇ ಪ್ರಾರಂಭವಾಗಬೇಕು. 11.30ಕ್ಕೆ ಅರ್ಧಗಂಟೆ ವಿರಾಮಕ್ಕಾಗಿ ಎದ್ದೇಳಬೇಕು. ತೀರ್ಪುಗಾರರು ಮತ್ತೆ ವಿಚಾರಣೆ ಪ್ರಾರಂಭಿಸಿ ಮಧ್ಯಾಹ್ನ 2 ಗಂಟೆಗೆ ಮುಕ್ತಾಗೊಳಿಸಬೇಕು. ಇದರಿಂದ ಸಂಜೆ ವೇಳೆ ಹೆಚ್ಚಿನ ಕೆಲಸ ಮಾಡಲು ಸಮಯ ಸಿಗುತ್ತದೆ ಎಂದು ಲಲಿತ್ ಸಲಹೆ ನೀಡಿದರು.