ಹಾಸನ: ಮದುವೆಗೆ ಒಪ್ಪದ್ದಕ್ಕೆ ಶಾಲಾ ಶಿಕ್ಷಕಿಯನ್ನು ಅಪಹರಿಸಿದ್ದ ಆರೋಪಿಯನ್ನು ಅಪಹರಣ ನಡೆದ ಏಳೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದು, ಶಿಕ್ಷಕಿಯನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಯನ್ನು ರಾಮು ಎಂದು ಗುರುತಿಸಲಾಗಿದೆ. ಆರೋಪಿ ಬಿಟ್ಟಗೌಡನಹಳ್ಳಿ ಬಳಿ ಶಾಲೆಗೆ ಹೊರಟು ನಿಂತಿದ್ದ ಶಿಕ್ಷಕಿಯನ್ನು ಅಪಹರಣ ಮಾಡಿದ್ದ. ಅತ್ತೆ ಮಗಳೇ ಆದ ಶಿಕ್ಷಕಿಯನ್ನು ಕಾರಿನಲ್ಲೇ ಮದುವೆಯಾಗಲು ಯತ್ನಿಸಿದ್ದಾನೆ. ಈ ವೇಳೆ ಕಾರನ್ನು ಬೆನ್ನಟ್ಟಿದ ಪೊಲೀಸರು, ದಕ್ಷಿಣ ಕನ್ನಡದ ನೆಲ್ಯಾಡಿ ಬಳಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಆರೋಪಿಯ ಕಾರನ್ನು ಬೆನ್ನಟ್ಟುತ್ತಿದ್ದಂತೆ, ರಾಮು ಒಬ್ಬನನ್ನೇ ಬಿಟ್ಟು ಕಾರಿನಲ್ಲಿದ್ದವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಾಸನ ನಗರ ಪೊಲೀಸರ ಕಾರ್ಯಾಚರಣೆಗೆ ಯುವತಿಯ ಕುಟುಂಬಸ್ಥರು ಹಾಗೂ ನಗರದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.










