ಧಾರವಾಡ : ಮದುವೆಗೆ ಪೋಷಕರು ಅಡ್ಡಿಯಾಗಿದ್ದರಿಂದಾಗಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ನಡೆದಿದೆ.
ತಡಹಾಳ ಗ್ರಾಮದ ಸಾವಿತ್ರಿ ಹಾಗೂ ಬಸವರಾಜ್ ಆತ್ಮಹತ್ಯೆ ಶರಣಾದವರು. ಬಸವರಾಜ್ ಅನ್ಯಜಾತಿಯ ಹುಡುಗ ಎಂದು ಸಾವಿತ್ರಿ ಮನೆಯವರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಸಾವಿತ್ರಿಯನ್ನ ಬೇರೆಯವರೊಂದಿಗೆ ಮದುವೆ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದ್ದರು. ಆದರೆ ಇದರಿಂದ ಮನನೊಂದು ಇಬ್ಬರು ವಿಷ ಸೇವಿಸಿದ್ದಾರೆ.
ಮೊದಲು ಇಬ್ಬರನ್ನು ನವಲಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿಯೇ ಸಾವಿತ್ರಿ ಸಾವನ್ನಪ್ಪಿದ್ದಾಳೆ. ಇನ್ನೂ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕ ಬಸವರಾಜ್ ಇಂದು ಬೆಳಗ್ಗೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಯುವಕ ಮತ್ತು ಯುವತಿಯ ಆತ್ಯಹತ್ಯೆ ನಿರ್ಧಾರದಿಂದಾಗಿ ಎರಡೂ ಕುಟುಂಬಗಳು ಇದೀಗ ಶೋಕದಲ್ಲಿ ಮುಳುಗುವಂತಾಗಿದೆ.










