ಮದುವೆಗೆ ಹೆಣ್ಣು ಸಿಗದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

86
firstsuddi

ಉತ್ತರ ಕನ್ನಡ: ಯುವಕನೋರ್ವ ಮದುವೆಯಾಗಲು ಹೆಣ್ಣು ಸಿಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ.

ಮೃತ ಯುವಕನನ್ನು ಯಲ್ಲಾಪುರದ ತೇಲಂಗಾರ ಕಿರಗಾರಿಮನೆ ನಿವಾಸಿ ನಾಗರಾಜ ಗಣಪತಿ ಗಾಂವ್ಕರ್ (35) ಎಂದು ಗುರುತಿಸಲಾಗಿದೆ.

ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಾಗರಾಜ ಎಲ್ಲರಂತೆಯೇ ತಾನೂ ಮದುವೆಯ ಕನಸು ಕಂಡಿದ್ದ. ಅಂತೆಯೇ ಹಲವು ಸಮಯದಿಂದ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದ. ಸಂಬಂಧಿಕರು, ಬ್ರೋಕರ್ ಗಳ ಬಳಿ ಹೆಣ್ಣು ಹುಡುಕಿಕೊಡಲು ಹೇಳುತ್ತಿದ್ದ. ಆದರೆ ಎಲ್ಲಿಯೂ ನಾಗರಾಜಗೆ ಹೆಣ್ಣು ಸಿಗುತ್ತಿರಲಿಲ್ಲ.

ತನಗೆ ಯಾಕೆ ಹೆಣ್ಣು ಸಿಗುತ್ತಿಲ್ಲ ಎಂದು ನಾಗರಾಜ ಪ್ರತಿನಿತ್ಯ ಯೋಚನೆಯಲ್ಲಿಯೇ ಮುಳುಗುತ್ತಿದ್ದ. ಹೀಗಾಗಿ ಖಿನ್ನತೆಗೆ ಒಳಗಾಗಿದ್ದ ನಾಗರಾಜ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾನೆ. ತನ್ನ ಮನೆಯ ಸಮೀಪದ ಗುಡ್ಡಕ್ಕೆ ತೆರಳಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.