ತೆಲಂಗಾಣ: ಮದುವೆಯಾಗಲು ಸೂಕ್ತ ಜೋಡಿಯನ್ನು ಹುಡುಕಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಕೊಚ್ಚಿ ಕೊಲೆಗೈದಿರುವ ಘಟನೆ ತೆಲಂಗಾಣದ ಸಿದ್ದಿಪೇಟೆಯಲ್ಲಿ ನಡೆದಿದೆ.
ತನಗೆ ಸೂಕ್ತ ವಧು ಸಿಗಲಿಲ್ಲ ಎಂಬ ಕಾರಣಕ್ಕೆ 45 ವರ್ಷದ ಮಹಿಳೆಯನ್ನು ಸ್ವಂತ ಮಗನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಹಿಳೆಯ ಮಗಳಿಂದ ಪ್ರಕರಣ ದಾಖಲಾಗಿದ್ದು, ಕೊಲೆಗೆ ಸಂಬಂಧಿಸಿದಂತೆ ಮಹಿಳೆಯ ಮಗ ಹಾಗೂ ಇನ್ನೊಬ್ಬ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯ ಬಳಿಕ ಪೊಲೀಸರಿಗೆ ಅನುಮಾನ ಬರದಂತೆ ದರೋಡೆಗೆ ಯತ್ನಿಸಿ ಕೊಲೆಯಾದಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ ಗುರುತು ಸಿಗದಂತೆ ಮಹಿಳೆಯ ಕತ್ತು ಸೀಳಿ ಕೈಕಾಲುಗಳನ್ನು ಕತ್ತರಿಸಿದ್ದಾರೆ. ಮಹಿಳೆಯನ್ನು ಇಟ್ಟಿಗೆಯಿಂದ ಹೊಡೆದು ಕೊಲೆಗೈಯಲಾಗಿದ್ದು, ಈ ಬಗ್ಗೆ ತನಿಖೆಯ ಸಂದರ್ಭದಲ್ಲಿ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.










