ಮದ್ಯದಂಗಡಿಗೆ ನೀಡಿರುವ ಪರವಾನಗಿ ರದ್ದುಪಡಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

131
firstsuddi

ಚಿಕ್ಕಮಗಳೂರು : ಇಲ್ಲಿನ ಸುಮುಖ ನಗರದಲ್ಲಿ ಮದ್ಯದಂಗಡಿ ತೆರೆಯಲು ಅಬಕಾರಿ ಇಲಾಖೆ ನೀಡಿರುವ ಪರವಾನಗಿಯನ್ನು ರದ್ದು ಪಡಿಸುವಂತೆ ಬಡಾವಣೆಯ ನಿವಾಸಿಗಳು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರನ್ನು ಇಂದು ಭೇಟಿ ಮಾಡಿದ ಸುಮುಖ ನಗರದ ನಿವಾಸಿಗಳು, ಬಿಸಿಎಂ ವಸತಿ ನಿಲಯದ ಮತ್ತು ಸೆಂಟ್ ಜಾನ್ಸ್ ಶಾಲೆಯ ವಿದ್ಯಾರ್ಥಿಗಳು ಈ ಸಂಬಂಧ ಮನವಿ ಸಲ್ಲಿಸಿದರು.

ಅಬಕಾರಿ ಇಲಾಖೆ ಸುಮುಖ ನಗರಕ್ಕೆ ಸಿ.ಎಲ್.02 ಮದ್ಯದಂಗಡಿಯನ್ನು ಸ್ಥಳಾಂತರಿಸಲು ಮದ್ಯದಂಗಡಿ ಮಾಲೀಕರಿಗೆ ಅನುಮತಿ ನೀಡಿದೆ. ಮದ್ಯದಂಗಡಿಯನ್ನು ತೆರೆಯುವುದರಿಂದ ಬಡಾವಣೆಯಲ್ಲಿ ಪ್ರತಿನಿತ್ಯ ಗಲಾಟೆ, ಗದ್ದಲ, ಅನೈತಿಕ ಚಟುವಟಿಕೆಗಳು ನಡೆಯುತ್ತವೆ, ಇದರಿಂದಾಗಿ ನಿವಾಸಿಗಳ ಶಾಂತಿ, ನೆಮ್ಮದಿ ಹಾಳಾಗುವುದರ ಜೊತೆಗೆ ಮಹಿಳೆಯರು ಬಡಾವಣೆಯಲ್ಲಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅಳಲು ತೋಡಿಕೊಂಡರು.

ಮದ್ಯದಂಗಡಿ ತೆರೆಯುವ ಬಗ್ಗೆ ಅಬಕಾರಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿಗಳಿಗೆ ಒಂದು ವರ್ಷದ ಹಿಂದೆಯೇ ಆಕ್ಷೇಪವನ್ನು ಸಲ್ಲಿಸಲಾಗಿದೆ, ಅಧಿಕಾರಿಗಳು ಶಾಸಕರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನೆಡೆಸಿ ಹಿಂಬರಹ ಸಹ ನೀಡಿದ್ದಾರೆ ಎಂದು ತಿಳಿಸಿದರು.

ಬಡಾವಣೆಯ ನಿವಾಸಿಗಳ ಮತ್ತು ಬಡಾವಣೆಯಲ್ಲಿರುವ ಬಿಸಿಎಂ ಹಾಸ್ಟೆಲ್ ಹಾಗೂ ಸೆಂಟ್ ಜಾನ್ಸ್ ಶಾಲೆಯ ವಿದ್ಯಾರ್ಥಿಗಳ ವಿರೋಧದ ನಡುವೆಯೂ ಅಬಕಾರಿ ಇಲಾಖೆ ಬಡಾವಣೆಯಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿದೆ ಎಂದು ಆರೋಪಿಸಿದರು.
ಬಡಾವಣೆಯ ವಿದ್ಯಾರ್ಥಿಗಳು ಮತ್ತು ನಿವಾಸಿಗಳ ಹಿತದೃಷ್ಠಿಯಿಂದ ಅಬಕಾರಿ ಇಲಾಖೆ ನೀಡಿರುವ ಪರವಾನಗಿಯನ್ನು ಖಾಯಂ ಆಗಿ ರದ್ದುಪಡಿಸುವಂತೆ ಆಗ್ರಹಿಸಿದರು.

ಬಡಾವಣೆಯ ನಿವಾಸಿಗಳಾದ ಎಂ.ಎ. ಸಂಜಿತ್, ಗೌತಮ್, ಡಾ|| ಯೋಗೀಶ್, ನಾಗೇಶ್, ಮೋಕ್ಷನಾಥ್, ಅರುಣ್, ಗಿರೀಶ್, ಸೆಂಟ್ ಜಾನ್ಸ್ ಶಾಲೆಯ ಕಾರ್ಯದರ್ಶಿ ರಾಜೇಶ್ ಹಾಜರಿದ್ದರು.